ADVERTISEMENT

ಕುಡ್ಲದ ನೀರುದೋಸೆಗೆ ದೆಹಲಿಗರು ಫಿದಾ

ಸರಸ್ ಆಜೀವಿಕ ಮೇಳಕ್ಕೆ ತೆರಳಿರುವ ತುಳುನಾಡಿನ ನಾಲ್ವರು ಗಟ್ಟಿಗಿತ್ತಿಯರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:53 IST
Last Updated 13 ಸೆಪ್ಟೆಂಬರ್ 2025, 6:53 IST
ದೆಹಲಿಯಲ್ಲಿ ನಡೆಯುತ್ತಿರುವ ಸರಸ್ ಮೇಳದಲ್ಲಿ ಭಾಗವಹಿಸಿರುವ ತುಳುನಾಡಿನ ಮಹಿಳೆಯರು
ದೆಹಲಿಯಲ್ಲಿ ನಡೆಯುತ್ತಿರುವ ಸರಸ್ ಮೇಳದಲ್ಲಿ ಭಾಗವಹಿಸಿರುವ ತುಳುನಾಡಿನ ಮಹಿಳೆಯರು   

ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ನೀರ್‌ದೋಸೆ, ಚಿಕನ್ ಸುಕ್ಕಾ, ಮೀನು ಫ್ರೈ, ಘೀ ರೈಸ್, ಕಬಾಬ್, ಸಜ್ಜಿಗೆ ರೊಟ್ಟಿ ಮೊದಲಾದ ತಿನಿಸುಗಳಿಗೆ ರಾಷ್ಟ್ರ ರಾಜಧಾನಿ ದೆಹಲಿಯ ನಿವಾಸಿಗಳು ಮನಸೋತಿದ್ದಾರೆ.

ದೆಹಲಿಯ ‘ಸರಸ್ ಆಜೀವಿಕ ಮೇಳ’ದಲ್ಲಿ ಈಗ ತುಳುನಾಡಿನ ತಿನಿಸುಗಳ ಹವಾ. ಗ್ರಾಮೀಣ ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮೀಣ ಕುಶಲಕರ್ಮಿಗಳ ವಸ್ತುಗಳ ಮಾರಾಟ ಮೇಳ (ಸರಸ್‌) ನಡೆಸುತ್ತಿದೆ. 

ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 20 ದಿನಗಳ ಮೇಳ ಪ್ರಾರಂಭವಾಗಿ ಒಂದು ವಾರ ಕಳೆದಿದೆ. ಕರ್ನಾಟಕದಿಂದ ಐದಾರು ತಂಡಗಳು ಭಾಗವಹಿಸಿದ್ದು,  ದಕ್ಷಿಣ ಕನ್ನಡ ಜಿಲ್ಲೆಯಿಂದ ಭಾಗಹಿಸಿರುವ ನಂದಿನಿ ಸ್ತ್ರೀ ಶಕ್ತಿ ಗುಂಪಿನ ಸದಸ್ಯೆಯರು ಸ್ಥಳದಲ್ಲೇ ಆಹಾರ ತಯಾರಿಸಿಕೊಟ್ಟು ಗ್ರಾಹಕರ ಮನಗೆದ್ದಿದ್ದಾರೆ. ‘ತುಳುನಾಡಿನ ತಿನಿಸುಗಳ ಸವಿಯನ್ನು ಹೊರರಾಜ್ಯಗಳ ಜನರಿಗೆ ಪರಿಚಯಿಸುವ ಆಸೆ ಸಾಕಾರಗೊಂಡಿದೆ. ನಾವು ತಯಾರಿಸುವ ನೀರ್‌ದೋಸೆ ಮತ್ತು ಚಿಕನ್ ಸುಕ್ಕಾಕ್ಕೆ ಬಲು ಬೇಡಿಕೆ. ನೀರ್‌ದೋಸೆ ತಿಂದವರು ಇದನ್ನು ತಯಾರಿಸುವ ರೆಸಿಪಿ ಕೇಳಿಕೊಂಡು ಹೋಗುತ್ತಾರೆ. ಒಮ್ಮೆ ತಿಂದವರು ಮತ್ತೆ ಮರುದಿನ ನಮ್ಮ ಸ್ಟಾಲ್‌ಗೇ ಬರುತ್ತಾರೆ’ ಎಂದು ತಂಡದ ನೇತೃತ್ವ ವಹಿಸಿರುವ ಎಕ್ಕೂರಿನ ಶ್ರೀದೇವಿ ಚೆಟ್ಟಿಯಾರ್ ತಿಳಿಸಿದರು.

ADVERTISEMENT

‘ಸ್ವಚ್ಛತೆ, ಸಮಯ ಪರಿಪಾಲನೆ, ಸಾವಯವ ವಸ್ತುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬೆಳಿಗ್ಗೆ 8.30ಕ್ಕೆ ಸ್ಥಳಕ್ಕೆ ಹಾಜರಾಗಿ, 11 ಗಂಟೆಯೊಳಗೆ ಎಲ್ಲ ತಿನಿಸುಗಳನ್ನು ಸಿದ್ಧವಿಡಬೇಕು. ಶೋಭಾ, ಲಕ್ಷ್ಮಿ, ದಿವ್ಯಾ ಸೇರಿ ನಾವು ನಾಲ್ವರು ಮಹಿಳೆಯರೇ ಸ್ಟಾಲ್ ಅನ್ನು ನಿರ್ವಹಣೆ ಮಾಡುತ್ತಿದ್ದೇವೆ. ಬಹುತೇಕ ಸ್ಟಾಲ್‌ಗಳನ್ನು ಪುರುಷರು ನಿರ್ವಹಣೆ ಮಾಡುತ್ತಾರೆ. ಕೆಲವು ಸ್ಟಾಲ್‌ಗಳಲ್ಲಿ ಮಹಿಳೆಯರು ಇದ್ದರೂ, ಅವರ ನೆರವಿಗೆ ಪುರುಷರು ಇರುತ್ತಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನೋಂದಣಿ ಹೇಗೆ?: ಮೊಬೈಲ್ ಅಪ್ಲಿಕೇಷನ್ ಮೂಲಕ ಸ್ವ ಸಹಾಯ ಸಂಘಗಳ ನಾಮ ನಿರ್ದೇಶನ ಮಾಡಲಾಗುತ್ತದೆ. ಮೇಳದ ಮಾನದಂಡಗಳಿಗೆ ಅನುಗುಣವಾಗಿರುವ ಸಂಘವನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯಿತಿಯು ಸಂಘಗಳಿಗೆ ಬೆಂಬಲ ನೀಡುವ ಜೊತೆಗೆ ಅವರ ಪ್ರಯಾಣ ವೆಚ್ಚ ಭರಿಸುತ್ತದೆ.

ಸ್ವಾವಲಂಬನೆ ಕಲಿಸಿದ ಸಂಘ ‘

ಗ್ರಾಮೀಣ ಭಾಗದ ನಮಗೆ ಸಂಜೀವಿನಿ ಸಂಘಗಳು ಸ್ವಾವಲಂಬಿ ಬದುಕನ್ನು ಕಲಿಸಿವೆ. ಆರ್ಥಿಕ ಸ್ವಾವಲಂಬನೆ ಜೊತೆಗೆ ಮಹಾನಗರದ ಜನರ ಜೊತೆ ಸರಿಸಮನಾಗಿ ಬೆರೆಯುವ ಧೈರ್ಯವನ್ನು ಕಲಿಸಿದೆ. ಸೆ.25ರವರೆಗೂ ಮೇಳದಲ್ಲಿ ಭಾಗವಹಿಸಿ ಹಿಂದಿರುತ್ತೇವೆ. ದೈನಂದಿನ ಅಡುಗೆ ಸಾಮಗ್ರಿಯಿಂದ ಹಿಡಿದು ಎಲ್ಲ ವಸ್ತುಗಳನ್ನು ನಾವೇ ಮಾರುಕಟ್ಟೆಯಿಂದ ತಂದು ಆಹಾರ ತಯಾರಿಸುವ ಮಟ್ಟಕ್ಕೆ ಸಂಘವು ನಮ್ಮನ್ನು ಬೆಳೆಸಿದೆ. ಹಿಂದೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದ ಮೇಳದಲ್ಲಿ ಭಾಗವಹಿಸಿದ್ದೆ. ದೆಹಲಿಗೆ ಬಂದಿದ್ದು ಮೊದಲು’ ಎಂದು ಶ್ರೀದೇವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.