ADVERTISEMENT

ಮಂಗಳೂರಿನಲ್ಲಿ ಸರ್ವಧರ್ಮ ಸಮ್ಮೇಳನ ಡಿ.4ರಂದು

ನಾರಾಯಣ ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಿದ್ಧತಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 20:12 IST
Last Updated 6 ನವೆಂಬರ್ 2025, 20:12 IST
ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿದರು.  ಜ್ಞಾನೇಂದ್ರತೀರ್ಥ ಸ್ವಾಮೀಜಿ, ಸತ್ಯಾನಂದತೀರ್ಥ ಸ್ವಾಮೀಜಿ, ಪೀತಾಂಬರ ಹೆರಾಜೆ, ವಿನಯಕುಮಾರ್ ಸೊರಕೆ, ಬಿ.ಕೆ ಹರಿಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿದರು.  ಜ್ಞಾನೇಂದ್ರತೀರ್ಥ ಸ್ವಾಮೀಜಿ, ಸತ್ಯಾನಂದತೀರ್ಥ ಸ್ವಾಮೀಜಿ, ಪೀತಾಂಬರ ಹೆರಾಜೆ, ವಿನಯಕುಮಾರ್ ಸೊರಕೆ, ಬಿ.ಕೆ ಹರಿಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ   

ಮಂಗಳೂರು: ನಾರಾಯಣ ಗುರು ಮತ್ತು ಗಾಂಧೀಜಿ ಮುಖಾಮುಖಿಯ ಶತಮಾನೋತ್ಸವ ಮತ್ತು ಗುರುಗಳ ಮಹಾಸಮಾಧಿಯ ಶತಮಾನೋತ್ಸವ ಸಿದ್ಧತಾ ಕಾರ್ಯಕ್ರಮಗಳ ಅಂಗವಾಗಿ ಸರ್ವಧರ್ಮ ಸಮ್ಮೇಳನ ಮತ್ತು ಯತಿಪೂಜೆ ಮಂಗಳೂರಿನಲ್ಲಿ ಡಿ.4ರಂದು ನಡೆಯಲಿದೆ.

ಕೇರಳದ ಶಿವಗಿರಿ ಮಠದ ಪ್ರತಿನಿಧಿ ಜ್ಞಾನೇಂದ್ರತೀರ್ಥ ಸ್ವಾಮೀಜಿ ಅಧ್ಯಕ್ಷತೆ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು.

‘ಗುರುಗಳು ಮಹಾಸಮಾಧಿಯಾಗಿ 98 ವರ್ಷ ಸಂದಿವೆ. ಸಮಾಧಿಯ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಶಿವಗಿರಿಯಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಚಾಲನೆ ನೀಡಿದ್ದಾರೆ. ಇದರೊಂದಿಗೆ ಗಾಂಧೀಜಿ ಮತ್ತು ಗುರುಗಳ ಸಂವಾದದ ನೂರನೇ ವರ್ಷ, ಆಲುವಾದಲ್ಲಿ ನಡೆದ ಭಾರತದ ಮೊದಲ ಸರ್ವಧರ್ಮ ಸಮ್ಮೇಳನದ ನೆನಪಿನ ಕಾರ್ಯಕ್ರಮಗಳು ಕೂಡ ವಿಶ್ವದಾದ್ಯಂತ ನಡೆಯುತ್ತಿವೆ. ಕರ್ನಾಟಕ ರಾಜ್ಯದ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಜ್ಞಾನೇಂದ್ರತೀರ್ಥರು ತಿಳಿಸಿದರು.

ADVERTISEMENT

ದಿನವಿಡೀ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅಧ್ಯಕ್ಷತೆ ವಹಿಸುವರು. ಕೇರಳದ 30 ಮಂದಿ ಸೇರಿದಂತೆ ಒಟ್ಟು 50 ಯತಿಗಳಿಗೆ ಗೌರವ ಮಂಗಳೂರು ಕಾರ್ಯಕ್ರಮದ ವೈಶಿಷ್ಟ್ಯ. ಮಧ್ಯಾಹ್ನದ ನಂತರ ಸರ್ವಧರ್ಮ ಸಮ್ಮೇಳನ ನಡೆಯಲಿದೆ’ ಎಂದು ಅವರು ವಿವರಿಸಿದರು.

ಬಿ.ಕೆ ಹರಿಪ್ರಸಾದ್ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಅಧ್ಯಯನ ಪೀಠಕ್ಕೆ ₹3 ಕೋಟಿ ಮೊತ್ತದ ಅನುದಾನ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮಗಳ ಅಂಗವಾಗಿ ಶಿವಗಿರಿ ಮಠದ ಶಾಖೆಯನ್ನು ಮಂಗಳೂರಿನಲ್ಲಿ ತೆರೆಯುವ ಚಿಂತನೆ ಇದ್ದು ಅದರ ಬಗ್ಗೆ ಚರ್ಚೆ ಆಗಬೇಕು ಎಂದರು.

ಸತ್ಯಾನಂದತೀರ್ಥ ಸ್ವಾಮೀಜಿ, ವಿಖ್ಯಾತಾನಂದ ಸ್ವಾಮೀಜಿ, ಶಾಸಕರಾದ ಸುನಿಲ್ ಕುಮಾರ್‌, ಉಮಾನಾಥ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪದ್ಮರಾಜ್‌ ಆರ್‌, ರಕ್ಷಿತ್ ಶಿವರಾಂ, ನಿವೃತ್ತ ಪೊಲೀಸ್ ಅಧಿಕಾರಿ ಪೀತಾಂಬರ ಹೆರಾಜೆ, ಮಂಗಳೂರು ವಿವಿ ನಾರಾಯಣ ಗುರು ಅಧ್ಯಯನ ಪೀಠದ ಅಧ್ಯಕ್ಷ ಜಯರಾಜ್‌, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.