
ಮಂಗಳೂರು: ‘ಸರ್ವಜ್ಞ ಸಮಾಜದ ಓರೆ ಕೋರೆಯನ್ನು ತನ್ನ ತ್ರಿಪದಿಯ ಮೂಲಕ ಜನರಿಗೆ ತಿಳಿಸಿದ ಮೇಧಾವಿ. ಜೀವನದ ಕಟು ಸತ್ಯಗಳನ್ನು ಪದಗಳಲ್ಲಿ ಕಟ್ಟಿಕೊಟ್ಟ ಅವರ ಬರಹಗಳು ಜ್ಞಾನದ ಭಂಡಾರ. ಶ್ರೇಷ್ಠ ಕವಿಗಳ ಸಾಲಲ್ಲಿ ಈ ಸರ್ವಜ್ಞ ಸೇರುತ್ತಾರೆ’ ಎಂದು ನಿವೃತ್ತ ಶಿಕ್ಷಕ ಮಹಾಬಲ ಕುಲಾಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಭಾ ಕರಾವಳಿ ವಿಭಾಗ ಮತ್ತು ದ.ಕ.ಜಿಲ್ಲಾ ಕುಲಾಲ- ಕುಂಬಾರರ ಯುವ ವೇದಿಕೆ ಮಂಗಳೂರು ಇವರ ಸಹಕಾರದೊಂದಿಗೆ ಶುಕ್ರವಾರ ಇಲ್ಲಿಯ ಬೋಂದೆಲ್ ಮಹಿಳಾ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿಯಲ್ಲಿ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಗುಣವಂತ ವಿ.ಗುನಗಿ, ’ವಿದ್ಯಾರ್ಥಿಗಳು ಕಲಿಯುಗದ ಸರ್ವಜ್ಞರಾಗಿ ಜ್ಞಾನವಂತರಾಗಬೇಕು. ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳು ಪುಣ್ಯವಂತರು. ಪ್ರತಿದಿನ ಸರ್ವಜ್ಞನ ಪ್ರತಿಮೆಯ ದರ್ಶನ ಪಡೆಯುತ್ತಾರೆ. ಅವರ ನುಡಿಯಂತೆ ನಡೆಯಲು ತ್ರಿಪದಿ ಕವಿ ಸರ್ವಜ್ಞ ಪ್ರೇರೇಪಿಸಲಿ‘ ಎಂದರು.
ಕುಲಾಲ ಕುಂಬಾರರ ಯುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಸುಧಾಕರ ಸಾಲಿಯಾನ್ ಮಾತನಾಡಿದರು.
ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‍ದಾಸ್, ಜಿಲ್ಲಾ ಮತ್ತು ಸುರತ್ಕಲ್ ಕುಲಾಲ ಸಂಘ ಹಾಗೂ ಯುವ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಪಾಲಿಟೆಕ್ನಿಕ್ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿಧ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು ಹಾಗೂ ಕುಲಾಲ ಸಮುದಾಯದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ.ಸ್ವಾಗತಿಸಿದರು. ಗಂಗಾಧರ ಬಂಜನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.