
ಮಂಗಳೂರು: ಈಜುಕೊಳದಲ್ಲಿ ರಾಜ್ಯಕ್ಕಾಗಿ ಪದಕಗಳನ್ನು ಗೆದ್ದುಕೊಟ್ಟಿರುವ ಮಂಗಳೂರಿನ ಸಾತ್ವಿಕ್ ನಾಯಕ್ ಸುಜೀರ್ ಅವರು ಓಪನ್ ವಾಟರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಚಿನ್ನ ಗೆದ್ದು ಸಂಭ್ರಮಿಸಿದರು.
ಭಾರತ ಈಜು ಫೆಡರೇಷನ್ ಆಶ್ರಯದಲ್ಲಿ ಕರ್ನಾಟಕ ಈಜು ಸಂಸ್ಥೆ ನಗರದ ತಣ್ಣೀರುಬಾವಿ ಬೀಚ್‌ನಲ್ಲಿ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನ ಪುರುಷರ 7.5 ಕಿಲೊಮೀಟರ್ ಗುಂಪು 2ರಲ್ಲಿ ಕರ್ನಾಟಕದವರೇ ಆದ ಕಿಶನ್ ಎಸ್.ವಿ ಅವರ ತೀವ್ರ ಸವಾಲನ್ನು ಮೀರಿ ಸಾತ್ವಿಕ್ ಮೊದಲಿಗರಾದರು. ಸುಜೀರ್ 1 ತಾಸು 51:6ನಿಮಿಷಗಳಲ್ಲಿ ಗುರಿ ತಲುಪಿದರೆ ಕಿಶನ್ 8 ಸೆಕೆಂಡು ತಡವಾಗಿ ಗುರಿಸೇರಿದರು.
ಪುರುಷರ 5ಕಿಮೀ ಮುಕ್ತ ವಿಭಾಗದ ಮೂರೂ ಪದಕಗಳು ಕರ್ನಾಟಕದ ಪಾಲಾದವು. ಪವನ್ ಧನಂಜಯ ಚಿನ್ನ ಗೆದ್ದರೆ ರೇಣುಕಾಚಾರ್ಯ ಮತ್ತು ಧ್ಯಾನ್ ಬಾಲಕೃಷ್ಣನ್ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಗಳಿಸಿದರು. ಬಾಲಕಿಯರ 3 ಕಿಮೀ ಗುಂಪು 4ರಲ್ಲೂ ಚಿನ್ನ ಮತ್ತು ಬೆಳ್ಳಿ ಕರ್ನಾಟಕದ ಪಾಲಾಯಿತು. ಬೆಂಗಳೂರಿನ ಇಡಿಕಾ ಭಟ್ ಚಿನ್ನ ಗಳಿಸಿದರೆ ಮಂಗಳೂರಿನ ದೇವಿಕಾ ಎಂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಬಾಲಕರ 3 ಕಿಮೀ ಗುಂಪು 4ರಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಕರ್ನಾಟಕ ಗೆದ್ದುಕೊಂಡಿತು. ಬಾಲಕಿಯರ 5 ಕಿಮೀ ಮುಕ್ತ ವಿಭಾಗದ ಕಂಚಿನ ಪದಕವೂ ಕರ್ನಾಟಕಕ್ಕೆ ಲಭಿಸಿತು.
ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ವಿಒನ್ ಈಜುಕೇಂದ್ರದ ಲೋಕರಾಜ್ ಬಳಿ ತರಬೇತಿ ಪಡೆಯುತ್ತಿದ್ದು ರಾಷ್ಟ್ರೀಯ ಓಪನ್ ವಾಟರ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸಿರುವುದಾಗಿ ಅವರ ತಂದೆ ಡಾ.ನಾಗೇಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶನಿವಾರದ ಫಲಿತಾಂಶಗಳು: 7.5ಕಿಮೀ ಪುರುಷರ ಗುಂಪು2: ಸಾತ್ವಿಕ್ ನಾಯಕ್ ಸುಜೀರ್ (ಕರ್ನಾಟಕ)–1. ಕಾಲ: 1ಗಂಟೆ 51:6ನಿಮಿಷ, ಕಿಶನ್ ಎಸ್.ವಿ (ಕರ್ನಾಟಕ)–2, ಸಿ.ಶರಣ್ (ತಮಿಳುನಾಡು)–3; 5 ಕಿಮೀ: ಪುರುಷರ ಮುಕ್ತ ವಿಭಾಗ: ಪವನ್ ಧನಂಜಯ (ಕರ್ನಾಟಕ)–1. ಕಾಲ: 1:3:22, ರೇಣುಕಾಚಾರ್ಯ ಎಚ್ (ಕರ್ನಾಟಕ)–2, ಧ್ಯಾನ್ ಬಾಲಕೃಷ್ಣ (ಕರ್ನಾಟಕ)–3; ಮಹಿಳೆಯರು: ಆಸ್ತಾ ಚೌಧರಿ (ಅಸ್ಸಾಂ)–1. ಕಾಲ: 1:13:46, ಜಾಹ್ನವಿ ಕಶ್ಯಪ್ (ಅಸ್ಸಾಂ)–2, ಜನ್ಯಾ ಬಿ.ಎಸ್ (ಕರ್ನಾಟಕ)–3; 3 ಕಿಮೀ: ಬಾಲಕರ ಗುಂಪು 4: ಮೋನಿಶ್ ಪಿ (ತಮಿಳುನಾಡು)–1. ಕಾಲ: 27:36ನಿ, ರೋನಿತ್ ಅರುಣ್ ಕುಮಾರ್ (ಕರ್ನಾಟಕ)–2, ಆದಿಲ್ (ಕರ್ನಾಟಕ–3; ಬಾಲಕಿಯರ ಗುಂಪು 4: ಇಡಿಕಾ ಭಟ್ (ಕರ್ನಾಟಕ)–1. ಕಾಲ: 32:31ನಿ, ದೇವಿಕಾ ಎಂ (ಕರ್ನಾಟಕ)–2, ರೇವಾ ನಿಖಿಲ್ (ತಮಿಳುನಾಡು)–3.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.