ADVERTISEMENT

ಮಂಗಳೂರು: ಕೌಟುಂಬಿಕ ವೀಸಾದಡಿ ಸೌದಿಗೆ ಪ್ರವಾಸ‌; ಹೊಸ ‘ವಿಘ್ನ’

​ಪ್ರಜಾವಾಣಿ ವಾರ್ತೆ
Published 30 ಮೇ 2023, 17:02 IST
Last Updated 30 ಮೇ 2023, 17:02 IST
ವೀಸಾ
ವೀಸಾ   

ಮಂಗಳೂರು: ಸೌದಿ ಅರೇಬಿಯಾಕ್ಕೆ ಪ್ರವಾಸ ಕೈಗೊಳ್ಳುವವರು ವೀಸಾ ಫೆಸಿಸಿಟಿ ಸರ್ವಿಸ್ (ಎಎಫ್‌ಎಸ್) ವ್ಯವಸ್ಥೆಯಡಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ಮೇ 1ರಿಂದ ತಂದಿದೆ. ಹಾಗಾಗಿ, ಪ್ರವಾಸಿಗರು ಬಯೊಮೆಟ್ರಿಕ್‌  ಹಾಗೂ ದಾಖಲೆಗಳನ್ನು ಸಲ್ಲಿಸಲು ಮಹಾನಗರಗಳಲ್ಲಿರುವ ಕಾನ್ಸುಲೇಟ್ ಕಚೇರಿಗೆ ಖುದ್ದು ಹಾಜರಾಗಬೇಕಾಗಿದೆ. ಕುಟುಂಬ ವೀಸಾದಡಿ ಸೌದಿ ಅರೇಬಿಯಾಕ್ಕೆ ತೆರಳುವ ಹಿರಿಯ ನಾಗರಿಕರು, ಮಹಿಳೆಯರು ಇದರಿಂದ ಸಮಸ್ಯೆ ಎದುರಿಸುವಂತಾಗಿದೆ.

ಸೌದಿ ಅರೇಬಿಯಾದಲ್ಲಿ ನೌಕರಿಯಲ್ಲಿರುವ ಈ ಪ್ರದೇಶದವರು ತಮ್ಮ ತಂದೆ- ತಾಯಿ, ಪತ್ನಿ ಅಥವಾ ಬಂಧುಗಳನ್ನು ಕೌಟುಂಬಿಕ ವೀಸಾದಡಿ ಅಲ್ಲಿಗೆ ಕರೆಸಿಕೊಳ್ಳುತ್ತಾರೆ. ಅಲ್ಲಿರುವವರ ಮನೆಯಲ್ಲಿ ಯಾರಿಗಾದರೂ ಹೆರಿಗೆಯಾದರೆ, ಬಾಣಂತನಕ್ಕೆ ಇಲ್ಲಿನ ಬಂಧುಗಳು ಕುಟುಂಬ ವೀಸಾದಡಿ ತೆರಳುವುದುಂಟು. ಕೌಟುಂಬಿಕ ವೀಸಾದಡಿ ಗರಿಷ್ಠ ಒಂದು ವರ್ಷ ಅಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ಸಿಗುತ್ತದೆ.

‘ಸೌದಿಯಿಂದ ಕಳುಹಿಸಿದ ವೀಸಾ ಪ್ರತಿಯ ಜತೆಗೆ, ಪಾಸ್‌ಪೋರ್ಟ್ ಮತ್ತು ಫೋಟೊವನ್ನು ಯಾವುದಾದರೂ ಟ್ರಾವೆಲಿಂಗ್ ಏಜೆನ್ಸಿ ಮೂಲಕ ದೇಶದ ಸೌದಿ ಕಾನ್ಸುಲೇಟ್ ಕಚೇರಿಗಳಿಗೆ ಸಲ್ಲಿಸಿ ಸ್ಟ್ಯಾಂಪಿಂಗ್ ಮಾಡಿಸಲು ಈ ಹಿಂದೆ ಅವಕಾಶವಿತ್ತು. ಆದರೆ, ಈಗ ಪ್ರವಾಸ ಕೈಗೊಳ್ಳುವವರು ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿಯಂತಹ ಪ್ರಮುಖ ನಗರಗಳಲ್ಲಿರುವ ಕಾನ್ಸುಲೇಟ್‌ ಕಚೇರಿಗೆ ಖುದ್ದಾಗಿ ತೆರಳಬೇಕಾಗಿದೆ’ ಎಂದು ದಕ್ಷಿಣ ಕನ್ನಡ ಹಜ್‌, ಉಮ್ರಾ ಪ್ರೈವೇಟ್‌ ಟೂರ್‌ ಆರ್ಗನೈಸೇಷನ್ಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಜಾಕೀರ್‌ ಇಕ್ಲಾಸ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

ADVERTISEMENT

‘ಸೌದಿ ಅರೇಬಿಯಾ ದೇಶದ ಹೊಸ ನಿಯಮ ಪ್ರಕಾರ ಅಲ್ಲಿಗೆ ತೆರಳುವ ಪ್ರವಾಸಿಗರು ಅಮೆರಿಕ, ಆಸ್ಟ್ರೇಲಿಯಾ, ಐರೋಪ್ಯ ರಾಷ್ಟ್ರಗಳ ಮಾದರಿಯಲ್ಲೇ ಪ್ರಮುಖ ನಗರಗಳಲ್ಲಿರುವ ಕಾನ್ಸುಲೇಟ್ ಕಚೇರಿಗೆ ಅರ್ಜಿ ಸಲ್ಲಿಸಬೇಕು. ವಿಎಫ್‌ಎಸ್ ಅಡಿ ಅರ್ಜಿ ಸಲ್ಲಿಸಿದ ಬಳಿಕ ಅವರನ್ನು ಬಯೊಮೆಟ್ರಿಕ್‌ಗಾಗಿ ಕರೆಯಲಾಗುತ್ತದೆ. ತಮ್ಮ ಸರದಿಗಾಗಿ ಪ್ರವಾಸಿಗರು ಕಾಯಬೇಕಾಗುತ್ತದೆ’ ಎಂದರು.

‘ಬಯೊಮೆಟ್ರಿಕ್‌ ನೀಡಿ, ಪಾಸ್‌ಪೋರ್ಟ್‌ನಲ್ಲಿ ಸ್ಟ್ಯಾಂಪಿಂಗ್‌ ಮಾಡಿಸಿಕೊಳ್ಳಲು ಕೆಲವು ಕಾನ್ಸುಲೇಟ್‌ ಕಚೇರಿಗಳಲ್ಲಿ 10ರಿಂದ 15 ದಿನಗಳವರೆಗೆ ಕಾಯಬೇಕಾದ ಸ್ಥಿತಿ ಇದೆ. ಹಿರಿಯ ನಾಗರಿಕರು, ಮಹಿಳೆಯರು ಪುಟ್ಟ ಮಕ್ಕಳನ್ನು ಹಿಡಿದುಕೊಂಡು ಕಚೇರಿಗೆ ಹೋಗಬೇಕು. ಪ್ರವಾಸಿಗರು ಈ ಉದ್ದೇಶಕ್ಕಾಗಿ ಕಾನ್ಸುಲೇಟ್‌ ಕಚೇರಿಗೆ ಹೋಗಿಬರಲು ಸಮಯವನ್ನು ವ್ಯಯಿಸುವುದರ ಜೊತೆಗೆ ಹೆಚ್ಚು ವೆಚ್ಚದ ಹೊರೆಯನ್ನೂ ಹೊರಬೇಕಾಗಿದೆ. ಇದಕ್ಕೆ ತಗಲುವ ಶುಲ್ಕವೂ ಹಿಂದಿಗಿಂತ ಹೆಚ್ಚಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.