ADVERTISEMENT

ವಿಶ್ವ ಕೊಂಕಣಿ ಕೇಂದ್ರ: ₹ 3.5 ಕೋಟಿ ವಿದ್ಯಾರ್ಥಿವೇತನ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 8:06 IST
Last Updated 11 ಡಿಸೆಂಬರ್ 2022, 8:06 IST
ವಿಶ್ವ ಕೊಂಕಣಿ ಕೇಂದ್ರ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ವಿದ್ಯಾರ್ಥಿವೇತನದ ಚೆಕ್‌ ಪ್ರದರ್ಶಿಸಿದರು 
ವಿಶ್ವ ಕೊಂಕಣಿ ಕೇಂದ್ರ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ವಿದ್ಯಾರ್ಥಿವೇತನದ ಚೆಕ್‌ ಪ್ರದರ್ಶಿಸಿದರು    

ಮಂಗಳೂರು: ಕೊಂಕಣಿ ಮಾತನಾಡುವ ವಿದ್ಯಾರ್ಥಿಗಳಿಗಾಗಿ ವಿಶ್ವ ಕೊಂಕಣಿ ಕೇಂದ್ರ ನೀಡುವ ವಿದ್ಯಾರ್ಥಿ ವೇತನವನ್ನು ನಗರದಟಿ.ವಿ.ರಮಣ ಪೈ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ದೇಶದ ವಿವಿಧ ಭಾಗಗಳ ಒಟ್ಟು 515 ವಿದ್ಯಾರ್ಥಿಗಳಿಗೆ ಒಟ್ಟು ₹ 3.5 ಕೋಟಿ ಮೊತ್ತವನ್ನು ಹಸ್ತಾಂತರಿಸಲಾಯಿತು.

ಕೊಂಕಣಿ ಭಾಸ್ ಅಣಿ ಸಂಸ್ಕೃತಿ ಪ್ರತಿಷ್ಠಾನ್ ಮತ್ತು ವಿಶ್ವ ಕೊಂಕಣಿ ವಿಧ್ಯಾರ್ಥಿವೇತನ ನಿಧಿಯ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯಮಿ ಮೋಹನ್ ದಾಸ್ ಪೈ ಆರ್ಥಿಕ ಸಂಕಷ್ಟದಿಂದಾಗಿ ಯಾರಿಗೂ ಶಿಕ್ಷಣ ಲಭಿಸದ ಪರಿಸ್ಥಿತಿ ಉಂಟಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿವೇತನ ನಿಧಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಈಗ ಜಗತ್ತೇ ಒಂದು ಹಳ್ಳಿಯಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿಭಾ ಪಲಾಯನ ಆಗಬಾರದು. ಮಂಗಳೂರು ನಿವೃತ್ತರ ನಗರ ಆಗಬಾರದು. ಈಗಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಷ್ಟೇ ಶ್ರೀಮಂತರಾದರೂ ಕೊಂಕಣಿ ಭಾಷೆ, ಕೊಂಕಣಿ ಸಂಸ್ಕೃತಿ ಮತ್ತು ಸನಾತನ ಪರಂಪರೆಯನ್ನು ಮರೆಯಬಾರದು. ಅದನ್ನು ಉಳಿಸಲು ಕಾಳಜಿ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ವಿದ್ಯಾರ್ಥಿವೇತನದಂಥ ಕಾರ್ಯದಿಂದ ಸ್ಥಳೀಯ ಪ್ರತಿಭೆಗಳನ್ನು ಇಲ್ಲೇ ಉಳಿಸಿಕೊಳ್ಳಲು ಸಾಧ್ಯ. ಆ ಮೂಲಕ ರಾಮರಾಜ್ಯದ ಕನಸು ನನಸಾಗಲು ಸಾಧ್ಯ. ದಾನ ಮಾಡುವ ಸಂಸ್ಕೃತಿಯನ್ನು ಉಳಿಸುವುದಕ್ಕೂ ಇಂಥ ಕಾರ್ಯಕ್ರಮಗಳು ಪ್ರೇರಣೆ ಆಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕೊಂಕಣಿ ಭಾಸ್ ಅಣಿ ಸಂಸ್ಕೃತಿ ಪ್ರತಿಷ್ಠಾನ್ ಅಧ್ಯಕ್ಷ ಪಿ.ದಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ರವೀಂದ್ರ ಪೈ, ಸಂದೀಪ್‌ ಶೆಣೈ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.