ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ₹101 ಕೋಟಿ ಆಸ್ತಿ ತೆರಿಗೆ ವಸೂಲಿ ಮಾಡಲಾಗಿದ್ದು, ಇನ್ನೂ ₹14 ಕೋಟಿ ವಸೂಲಿ ಬಾಕಿ ಇದೆ. ಇದಕ್ಕಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಹೇಳಿದರು.
ತೆರಿಗೆ ವಸೂಲಾತಿ ಆಂದೋಲನ ವಾಹನ ಸಂಚಾರಕ್ಕೆ ಬುಧವಾರ ಹಸಿರು ನಿಶಾನೆ ತೋರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 2023–24ನೇ ಸಾಲಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 2.16 ಲಕ್ಷ ಆಸ್ತಿದಾರರು ಇದ್ದಾರೆ. ಒಟ್ಟು ₹115 ಕೋಟಿ ತೆರಿಗೆ ಲೆಕ್ಕ ಹಾಕಲಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎರಡು ವಾಹನಗಳು ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಸಂಚರಿಸಿ, ಧ್ವನಿವರ್ಧಕದ ಮೂಲಕ ತೆರಿಗೆ ಪಾವತಿಸುವಂತೆ ವಿನಂತಿಸಲಿವೆ ಎಂದರು.
ಪಾಲಿಕೆಯ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿ ತೆರಿಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಆನೈಲೈನ್ ಮೂಲಕವೂ ಸುಲಭದಲ್ಲಿ ಪಾವತಿಸಬಹುದು. ಕೆಲವು ಉದ್ಯಮಿಗಳು ಹಲವಾರು ತಿಂಗಳುಗಳಿಂದ ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅಂತಹವರಿಗೆ ನೋಟಿಸ್ ನೀಡಲು ಯೋಚಿಸಲಾಗಿದೆ. ಎರಡು ತಿಂಗಳುಗಳಲ್ಲಿ ಬಾಕಿ ಪಾವತಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ವಿಶೇಷ ರಿಯಾಯಿತಿ: 2025–26ನೇ ಸಾಲಿನಲ್ಲಿ ಮುಂಗಡ ತೆರಿಗೆ ಪಾವತಿ ಮೇಲೆ ಶೇ 5ರ ರಿಯಾಯಿತಿ ನೀಡಲಾಗುತ್ತದೆ. ಈ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಪಾಲಿಕೆಯಿಂದ ಕರೆ ಮಾಡಿ ತಿಳಿಸಲಾಗುತ್ತಿದೆ. ಮಾಹಿತಿ ಅಗತ್ಯವಿದ್ದಲ್ಲಿ 0824-2220313/306 ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ರವಿಚಂದ್ರ ನಾಯಕ್ ಹೇಳಿದರು.
ಪಾಲಿಕೆಯ ಪ್ರತಿ ಸದಸ್ಯರಿಗೆ ತಲಾ ₹25 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ಮೇಯರ್‌ಗೆ ₹1.30 ಕೋಟಿ ಅನುದಾನ ಮಂಜೂರು ಆಗಿದೆ. ಆದ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುತ್ತದೆ ಎಂದರು.
‘70 ದಿನಕ್ಕೆ ಸಾಕಾಗುವಷ್ಟು ನೀರು’
ಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ ತುಂಬೆ ಕಿಂಡಿ ಅಣೆಕಟ್ಟೆಯಲ್ಲಿ 70 ದಿನಕ್ಕೆ ಸಾಕಾಗುವಷ್ಟು ನೀರಿನ ಸಂಗ್ರಹ ಇದೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮವಹಿಸಲಾಗುವುದು. ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾದಲ್ಲಿ ಅಡ್ಯಾರು ಕಿಂಡಿ ಅಣೆಕಟ್ಟೆಯಿಂದ ನೀರನ್ನು ಪಂಪ್ ಮಾಡಿ ತುಂಬೆ ಅಣೆಕಟ್ಟೆ ಭರ್ತಿ ಮಾಡಲಾಗುತ್ತದೆ. ತುಂಬೆಯಲ್ಲಿ ಪ್ರತ್ಯೇಕ ಜಾಕ್‌ವೆಲ್ ನಿರ್ಮಿಸಿ ಉಳ್ಳಾಲಕ್ಕೆ ಪ್ರಾಯೋಗಿಕವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲಿನ ಕುಡಿಯುವ ನೀರಿನ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡ ಮೇಲೆ ಪಾಲಿಕೆ ವತಿಯಿಂದ ನೀಡುವ ನೀರನ್ನು ನಿಲ್ಲಿಸಲಾಗುವುದು. ಉಳ್ಳಾಲ ನಗರಸಭೆಯಿಂದ ₹2.7 ಕೋಟಿ ಮೂಲ್ಕಿ ಪಟ್ಟಣ ಪಂಚಾಯಿತಿಯಿಂದ ₹1.2 ಕೋಟಿ ನೀರಿನ ಬಿಲ್ ಪಾವತಿ ಬಾಕಿ ಇದೆ ಎಂದು ರವಿಚಂದ್ರ ನಾಯಕ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.