ADVERTISEMENT

ದಕ್ಷಿಣ ಕನ್ನಡ: ಕೋವಿಡ್–19 ಸೋಂಕಿತ ವೃದ್ಧೆ ಗುಣಮುಖ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಕಾಸರಗೋಡಿನ ಎಲ್ಲ ಸೋಂಕಿತರೂ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 14:54 IST
Last Updated 12 ಏಪ್ರಿಲ್ 2020, 14:54 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರು ಚೇತರಿಸಿಕೊಳ್ಳುತ್ತಿದ್ದು, ಇದೀಗ ಏಳನೇ ರೋಗಿಯೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಕೋವಿಡ್‌–19 ಸೋಂಕಿನಿಂದ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾಸರಗೋಡಿನ ನಾಲ್ವರೂ ಬಿಡುಗಡೆ ಆದಂತಾಗಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 70 ವರ್ಷದ ವೃದ್ಧೆ ಇದೀಗ ಗುಣಮುಖರಾಗಿದ್ದಾರೆ. ಅವರ ಗಂಟಲು ದ್ರವದ ಮಾದರಿಯನ್ನು ಇದೇ 7 ಮತ್ತು 8 ರಂದು ಪರೀಕ್ಷೆಗೆ ಕಳುಹಿಸಿದ್ದು, ವರದಿಯಲ್ಲಿ ಸೋಂಕು ಇಲ್ಲದೇ ಇರುವುದು ಖಚಿತವಾಗಿದೆ. ಇದರಿಂದಾಗಿ ಭಾನುವಾರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಮಾರ್ಚ್‌ 9 ರಂದು ಸೌದಿ ಅರೇಬಿಯಾದಿಂದ ಕ್ಯಾಲಿಕಟ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಈ ವೃದ್ಧೆ, ಮಾರ್ಚ್‌ 19 ರಂದು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ್‌ 24 ರಂದು ಇವರಿಗೆ ಕೋವಿಡ್–19 ಸೋಂಕು ತಗಲಿರುವುದು ಖಚಿತವಾಗಿತ್ತು. ನಿರಂತರ ಚಿಕಿತ್ಸೆ ಹಾಗೂ ವೈದ್ಯಕೀಯ ನಿಗಾದಿಂದ ಇದೀಗ ವೃದ್ಧೆ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ತಗಲಿದ ಒಟ್ಟು 12 ಪ್ರಕರಣಗಳು ಇದ್ದವು. ಈ ಪೈಕಿ ಒಬ್ಬರು ಭಟ್ಕಳದವರಾಗಿದ್ದಾರೆ. ನಾಲ್ವರು ಕಾಸರಗೋಡು ಜಿಲ್ಲೆಗೆ ಸೇರಿದವರಾಗಿದ್ದರು. ಇನ್ನೊಬ್ಬ ವೃದ್ಧೆ ಉಡುಪಿ ಜಿಲ್ಲೆಯವರಾಗಿದ್ದಾರೆ. ಉಳಿದ ಆರು ಜನರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದಾರೆ.

ಈ ಪೈಕಿ ಕಾಸರಗೋಡು ಜಿಲ್ಲೆಯ ಮೂವರು ಹಾಗೂ ಭಟ್ಕಳದ ಯುವಕ ಇದೇ 6 ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿಯ ಯುವಕ ಇದೇ 10 ರಂದು ಹಾಗೂ ಬಂಟ್ವಾಳ ತಾಲ್ಲೂಕು ಸಜಿಪನಡು ಗ್ರಾಮದ 10 ತಿಂಗಳ ಮಗು ಇದೇ 11 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 26, 34, 39, 40, 41, 56 ಹಾಗೂ 64 ನೇ ರೋಗಿಗಳು ಗುಣಮುಖರಾಗಿದ್ದಾರೆ.

ಇದೀಗ ಬಂಟ್ವಾಳ ತಾಲ್ಲೂಕಿನ ತುಂಬೆ, ಮಂಗಳೂರು ತಾಲ್ಲೂಕಿನ ತೊಕ್ಕೊಟ್ಟು, ಸುಳ್ಯ ತಾಲ್ಲೂಕಿನ ಅಜ್ಜಾವರ, ಪುತ್ತೂರು ತಾಲ್ಲೂಕಿನ ಆರ್ಯಾಪು ಹಾಗೂ ಉಡುಪಿ ಜಿಲ್ಲೆಯ ವೃದ್ಧೆಯೊಬ್ಬರು ಇನ್ನೂ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನರ ಪೈಕಿ 7 ಮಂದಿ ಗುಣಮುಖರಾಗಿದ್ದು, 5 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

8 ನೇ ದಿನವೂ ನೆಗೆಟಿವ್‌: ಜಿಲ್ಲೆಯಲ್ಲಿ ಸತತ 8 ನೇ ದಿನವೂ ಕೋವಿಡ್‌–19 ನ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ. ಭಾನುವಾರ ಒಟ್ಟು 28 ಮಾದರಿಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್‌ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.