ADVERTISEMENT

ತುಳುನಾಡ ಪರಂಪರೆಯ ಜಾಗೃತಿ ಮೂಡಿಸಿ: ಶೈಲೇಶ್ ಆರ್.ಜೆ.

ಬೆಳ್ತಂಗಡಿಯಲ್ಲಿ ‘ಚೆನ್ನೆಮಣೆ ಗೊಬ್ಬುದ ಪಂಥೋ’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 5:12 IST
Last Updated 8 ಆಗಸ್ಟ್ 2022, 5:12 IST
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ‘ಚೆನ್ನೆಮಣೆ ಗೊಬ್ಬುದ ಪಂಥೋ’ ಕಾರ್ಯಕ್ರಮವನ್ನು ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ ಉದ್ಘಾಟಿಸಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ‘ಚೆನ್ನೆಮಣೆ ಗೊಬ್ಬುದ ಪಂಥೋ’ ಕಾರ್ಯಕ್ರಮವನ್ನು ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ ಉದ್ಘಾಟಿಸಿದರು.   

ಬೆಳ್ತಂಗಡಿ: ‘ತುಳುನಾಡಿನ ಹಲವು ಸಾಂಪ್ರದಾಯಿಕ ಆಟಗಳಲ್ಲಿ ಚೆನ್ನಮಣೆ ಆಟ ಪ್ರಮುಖವಾದುದು. ತುಳುವರ ಆಟಿ ತಿಂಗಳ ಈ ಆಟ ಹಿರಿಯರ ಜೊತೆಗೂಡಿ ಆಡುವುದೇ ಸೊಗಸಾದ ಅನುಭವವಾಗಿದೆ. ಇಂತಹ ಆಟಗಳ ಮೂಲಕ ತುಳು ಪರಂಪರೆಯ ಬಗ್ಗೆ ಜಾಗೃತಿ ಮೂಡಲು ಸಾಧ್ಯ’ ಎಂದು ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ. ಹೇಳಿದರು.

ಬೆಳ್ತಂಗಡಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತುಳುನಾಡು ಒಕ್ಕೂಟ ನೇತೃತ್ವದಲ್ಲಿ 2ನೇ ವರ್ಷದ ‘ಚೆನ್ನಮಣೆ ಗೊಬ್ಬುದ ಪಂಥೊ’ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲವಾರು ವರ್ಷಗಳ ಹಿಂದೆ ತುಳುನಾಡಿನ ವಿಚಾರ, ತುಳು ಸಂಪ್ರದಾಯದ ಕುರಿತು ಮಾತನಾಡುವಾಗ ತಮಾಷೆ ಮಾಡುವ ವಾತಾವರಣವಿತ್ತು. ಆದರೆ, ಇಂದು ತುಳು ವಿಚಾರಗಳ ಕುರಿತು ಜನ ಜಾಗೃತರಾಗಿದ್ದಾರೆ. ತುಳು ನಮ್ಮ ಮಣ್ಣಿನ ಭಾಷೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತುಳು ಭಾಷೆಯನ್ನು ಕಲಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ’ ಎಂದರು.

ADVERTISEMENT

ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಧಾಕೃಷ್ಣ ಮಾತನಾಡಿ, ‘ತುಳುನಾಡಿನ ಸಾಂಪ್ರದಾಯಿಕ ಅನೇಕ ಆಟಗಳು ಭೂಮಿಯಿಂದ ಬಂದ ಕಲೆಯಾಗಿದೆ. ಅವು ನಮ್ಮ ವ್ಯವಸಾಯದ ಮೂಲದಿಂದ ಬಂದವು. ಹಾಗಾಗಿ, ಅವುಗಳಲ್ಲಿ ಅನುಭವ ಸಿಗುತ್ತಿತೇ ಹೊರತು ಬದುಕು ಬರಡಾಗುತ್ತಿರಲಿಲ್ಲ. ಇಂದಿನ ಅನೇಕ ಆಟಗಳು ಜೂಜಿನ ಆಟಗಳಾಗಿ ಬೆಳೆದುಬಿಟ್ಟಿರುವುದು ದುರಂತ’ ಎಂದರು.

ವಕೀಲ ಗೋಪಾಲಕೃಷ್ಣ ಬಿ, ಅಶ್ವಿನಿ ಎ.ಹೆಬ್ಬಾರ್ ಮುಂಡಾಜೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಚೇತಕ್ ಪೂಜಾರಿ, ದೈವ ಪಾತ್ರಿ ರವೀಶ್ ಪಡುಮಲೆ, ಬೆಂಗಳೂರು ಉದ್ಯಮಿ ನಟೇಶ್ ಇದ್ದರು. ತುಳುನಾಡು ಒಕ್ಕೂಟದ ಅಧ್ಯಕ್ಷ ಶೇಖರ್ ಗೌಡತ್ತಿಗೆ ಅಧ್ಯಕ್ಷತೆ ವಹಿಸಿದ್ದರು.

ವಸಂತ ಹೇಬೆಬೈಲು, ರಮೇಶ್ ದೋಂಡೋಲೆ, ಹೇಮಂತ್ ನಾವೂರು, ಶುಭಲಕ್ಷ್ಮೀ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ತುಳುನಾಡು ಒಕ್ಕೂಟದ ಕಾರ್ಯದರ್ಶಿ ರಾಜು ಬಿ.ಎಚ್ ಕಾರ್ಯಕ್ರಮ ನಿರೂಪಿಸಿದರು. ಹೇಮಾವತಿ ಕೆ. ಸ್ವಾಗತಿಸಿದರು. ನವೀನ್ ಟೈಲರ್ ವಂದಿಸಿದರು.

ತುಳುನಾಡ ಉಳಿವಿಗೆ ರಾಜಾಶ್ರಯ ಬೇಕಾಗಿದೆ. ತುಳು ಭಾಷೆಗೆ ಮಾನ್ಯತೆ ಸಿಗುವಲ್ಲಿ ನಾವೆಲ್ಲ ಶ್ರಮಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.