ಮಂಗಳೂರು: ಶಿರಾಡಿ ಘಾಟಿಯಲ್ಲಿ ಈಗಿರುವ ರಸ್ತೆಗೆ ಹೆಚ್ಚುವರಿಯಾಗಿ ದ್ವಿಪಥ ನಿರ್ಮಾಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ವಿನಂತಿಸಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಯೋಜನೆ ಡಿಪಿಆರ್ ಸಿದ್ಧವಾಗುತ್ತಿದೆ. ರಸ್ತೆ ಮತ್ತು ರೈಲು ಮಾರ್ಗ ಸಮಾನಾಂತರವಾಗಿ ನಿರ್ಮಾಣವಾದರೆ, ಪರಿಸರ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಿದೆ. ಜೊತೆಗೆ, ಅರಣ್ಯ ಇಲಾಖೆ ಅನುಮತಿ ಸೇರಿದಂತೆ ಇತರ ಪ್ರಕ್ರಿಯೆಗಳು ಶೀಘ್ರ ನಡೆಯುತ್ತವೆ. ಈ ವಿಷಯವನ್ನು ಹೆದ್ದಾರಿ ಸಚಿವ ಮತ್ತು ರೈಲ್ವೆ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಮಂಗಳೂರು ಬಂದರು ಅಭಿವೃದ್ಧಿ ಮತ್ತು ಸಮಗ್ರ ಕರಾವಳಿ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ಮಹತ್ವದ್ದಾಗಿದೆ. ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಹಾಗೂ ಇನ್ನೂ ಕೆಲವರು ವಿಧಾನ ಮಂಡಲ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಈ ಯೋಜನೆಯು ಕರ್ನಾಟಕದ ಆರ್ಥಿಕತೆ ಅಭಿವೃದ್ಧಿಗೂ ಅನುಕೂಲ. ರಾಜ್ಯ ಸರ್ಕಾರ ಕೂಡ ಇದನ್ನು ಆದ್ಯತೆಯಲ್ಲಿ ಪರಿಗಣಿಸಿ, ಅನುಮತಿ ಸೇರಿದಂತೆ ಉಳಿದೆಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದರು.
ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮಂಗಳೂರಿನಲ್ಲಿರುವ ಕ್ರ್ಯೂ ಬೇಸ್ ಸ್ಥಳಾಂತರದ ಬಗ್ಗೆ ಮಾಹಿತಿ ದೊರೆತಿದ್ದು, ಇದನ್ನು ಇಲ್ಲಿಯೇ ಮುಂದುವರಿಸುವಂತೆ ವಿನಂತಿಸಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ರೋಡ್ ನಡುವೆ ರೈಲು ಸಂಚಾರಕ್ಕೆ ಏ.12ರಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ. ಇದರಿಂದ ಸಾರ್ವಜನಿಕರು, ಕುಕ್ಕೆಗೆ ತೆರಳುವ ಭಕ್ತರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಅರುಣ್ ಶೇಟ್, ರಮೇಶ್ ಕಂಡೆಟ್ಟು, ಮೋಹನ, ವಸಂತ ಪೂಜಾರಿ ಇದ್ದರು.
ಕಬಡ್ಡಿ ಮ್ಯಾಟ್ ವಿತರಣೆ
ಹನುಮಾನ್ ಜಯಂತಿ ಪ್ರಯುಕ್ತ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ಸಿಎಸ್‌ಆರ್ ನಿಧಿಯಡಿ ವಿವಿಧ ಸಂಘ–ಸಂಸ್ಥೆಗಳಿಗೆ ಕಬ್ಬಡ್ಡಿ ಮ್ಯಾಟ್ ವಿತರಣೆ ಕಾರ್ಯಕ್ರಮವು ಏ.13ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯಲಿದೆ. ಕ್ರೀಡಾ ಭಾರತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವ ನೀಡಿವೆ ಎಂದು ಬ್ರಿಜೇಶ್ ಚೌಟ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.