ADVERTISEMENT

ಮಧೂರು ಬ್ರಹ್ಮಕಲಶಕ್ಕೆ ಕುದುರೆಯಲ್ಲಿ ಬಂದ ‘ಶಿವಾಜಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 6:55 IST
Last Updated 2 ಏಪ್ರಿಲ್ 2025, 6:55 IST
ಮಧೂರು ದೇವಾಲಯ ಆವರಣದಲ್ಲಿ ಕುದುರೆ ಏರಿ ಬಂದ ಶಿವಾಜಿ ವೇಷಧಾರಿ
ಮಧೂರು ದೇವಾಲಯ ಆವರಣದಲ್ಲಿ ಕುದುರೆ ಏರಿ ಬಂದ ಶಿವಾಜಿ ವೇಷಧಾರಿ   

ಕಾಸರಗೋಡು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಡಗರವನ್ನು ಹೆಚ್ಚಿಸಲು ಕುದುರೆ ಏರಿ ಬಂದ ‘ಛತ್ರಪತಿ ಶಿವಾಜಿ ಮಹಾರಾಜ’ ಗಮನ ಸೆಳೆದಿದ್ದಾನೆ.

ಬ್ರಹ್ಮಕಲಶ, ಮೂಡಪ್ಪ ಸೇವೆ, ವಾರ್ಷಿಕ ಜಾತ್ರೆಗೆ ವಿವಿಧ ಸಂಘಟನೆಗಳು ಸೇವಾ ರೂಪದಲ್ಲಿ ಹಸಿರು ಹೊರೆಕಾಣಿಕೆ ತಂದೊಪ್ಪಿಸುತ್ತಿವೆ. ಸಂಪ್ರದಾಯದಂತೆ ಆರ್ಯ ಮರಾಠ ಸಮಾಜದ ದೇವರಮನೆ ಒಕ್ಕೂಟ ಮತ್ತು ಆರ್ಯ ಸಮುದಾಯ ಸಂಘದ ವತಿಯಿಂದ ನಡೆಸಲಾದ ಮೆರವಣಿಗೆಯಲ್ಲಿ ಶಿವಾಜಿ ಮಹಾರಾಜನ ವೇಷಧಾರಿ ಕುದು ಏರಿ ಬಂದಾಗ ಭಕ್ತರು ಸಂಭ್ರಮಿಸಿದರು.

ಖಡ್ಗವನ್ನು ಹಿಡಿದು ಶ್ವೇತ ಅಶ್ವವನ್ನು ಏರಿದ್ದ ಶಿವಾಜಿ ವೇಷಧಾರಿಯ ಶೈಲಿಗೆ ಹಿಂಬಾಲಕರು ‘ಜೈ ಭವಾನಿ’, ‘ವೀರ ಶಿವಾಜಿ’ ಘೋಷಣೆಗಳನ್ನು ಮೊಳಗಿಸಿದರು. ಶಿವಾಜಿಯ ಕುದುರೆಯೂ ಆಗಾಗ ಕಾಲುಗಳನ್ನು ಎತ್ತಿ ನೋಡುಗರಿಗೆ ಸಂಭ್ರಮ ಉಂಟು ಮಾಡಿತು.

ADVERTISEMENT

ಮೆರವಣಿಗೆಯ ಅಂಗವಾಗಿ ಆರ್ಯ ಮರಾಠ ಸಂಪ್ರದಾಯದಂತೆ ವೀರಗಚ್ಛೆ, ಪೇಟಧಾರಿಣಿ ವನಿತೆಯರು, ಮಕ್ಕಳು, ಸಾಂಪ್ರದಾಯಿಕ ಉಡುಪು, ಪೇಟದೊಂದಿಗೆ ಪುರುಷರು ಕಂಗೊಳಿಸಿದರು. ಜೋಗ್ ಛಾಪ್ ನೃತ್ಯಗಾತಿಯರೂ ಭಾಗವಹಿಸಿದ್ದರು. ಆರ್ಯ ಮರಾಠ ಸಂಘಟನೆಗಳ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಘಟಕಗಳು ಮೆರವಣಿಗೆಯ ನೇತೃತ್ವ ವಹಿಸಿದ್ದವು.

ಮಧೂರಿನಲ್ಲಿ ಇಂದು ಬ್ರಹ್ಮಕಲಷಾಭಿಷೇಕ

ಕಾಸರಗೋಡು: ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಏ.2ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ.

ಬೆಳಗ್ಗೆ 7ರಿಂದ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 9.55ಕ್ಕೆ ತಂತ್ರಿ ದೇರೆಬೈಲು ಶಿವಪ್ರಸಾದ್ ಅವರ ನೇತೃತ್ವದಲ್ಲಿ ಬ್ರಹ್ಮಕಲಷಾಭಿಷೇಕ ನಡೆಯಲಿದೆ. ಇಲ್ಲಿ ನಡೆಯುವ ಮಹಾಮೂಡಪ್ಪ ಸೇವೆ ಸಂಬಂಧ ಪ್ರಾರ್ಥನೆ, ಧ್ವಜಾರೋಹಣ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗಗಳೂ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.