ಮಂಗಳೂರು: ಶಿವರಾಮ ಕಾರಂತರು ಭೌತಿಕವಾಗಿ ಈ ನೆಲದಲ್ಲಿ ಇಲ್ಲದಿರಬಹುದು, ಆದರೆ, ಅವರ ವಿಚಾರಧಾರೆ ನಿತ್ಯ ನಿರಂತರ ಜೀವಂತವಾಗಿರುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕಲ್ಕೂರ ಪ್ರತಿಷ್ಠಾನವು ಮಂಗಳವಾರ ಇಲ್ಲಿಯ ಶಾರದಾ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ‘ಕಾರಂತ ಹುಟ್ಟುಹಬ್ಬ’ ಕಾರ್ಯಕ್ರಮದಲ್ಲಿ ಕಾರಂತ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ರಾಜ್ಯೋತ್ಸವ ಪ್ರಶಸ್ತಿಗಾಗಿ ನಡೆಯುವ ಲಾಬಿ ಹೇಳಲು ಸಾಧ್ಯವಾಗದು. ಆದರೆ, ನೇರ, ನಿಷ್ಠುರ ನುಡಿಗೆ ಹೆಸರಾಗಿದ್ದ ಕಾರಂತರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಹೆಚ್ಚು ಮೌಲಿಕವಾದದ್ದು ಅನ್ನಿಸುತ್ತದೆ. ಈ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಹೆಮ್ಮೆಯಿದೆ ಎಂದರು.
ಶಿಕ್ಷಣ ವಾಣಿಜ್ಯೀಕರಣಗೊಳ್ಳುತ್ತಿದೆ. ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಸರ್ಕಾರ ನಡೆಸುವವರು ತೆಗೆದುಕೊಳ್ಳುವ ತೀರ್ಮಾನಗಳು ಇದಕ್ಕೆ ಕಾರಣ. ಸರ್ಕಾರ ನಡೆಸುವವರಲ್ಲಿ ಬಹಳಷ್ಟು ಮಂದಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಡೊನೇಷನ್, ಶುಲ್ಕ ತೆಗೆದುಕೊಳ್ಳುತ್ತಾರೆ. ಪರಿಣಾಮವಾಗಿ ಹಳ್ಳಿ–ಹಳ್ಳಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭವಾಗಿದ್ದು, ಕನ್ನಡ ಮಾಧ್ಯಮ ಶಾಲೆಗಳು ಆತಂಕದ ಸ್ಥಿತಿಯಲ್ಲಿವೆ. ಶಿಕ್ಷಕರ ನೇಮಕವೂ ಆಗುತ್ತಿಲ್ಲ. ಕನ್ನಡ ಶಾಲೆಗಳು ಉಳಿಯಬೇಕಾಗಿದೆ. ಆದರೆ, ಇವನ್ನು ಉಳಿಸುವ ಆಸಕ್ತಿ ಯಾರಿಗೂ ಇಲ್ಲ ಎಂದರು.
ಕೇರಳದಲ್ಲಿ ಒಂದು ತರಗತಿಗೆ ಒಬ್ಬರು ಶಿಕ್ಷಕರಿದ್ದಾರೆ. ಕರ್ನಾಟಕದಲ್ಲಿ ಐದು ತರಗತಿಗಳಿಗೆ ಒಬ್ಬರು ಶಿಕ್ಷಕರು ಇದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಕಾಯಂ ಉಪನ್ಯಾಸಕರು ಇಲ್ಲ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಸೂಚನೆ ನೀಡುತ್ತದೆ. ಶಿವರಾಮ ಕಾರಂತ, ವಿ.ಕೃ. ಗೋಕಾಕ್‌ರಂತಹ ಮಾತೃಭಾಷೆಯಲ್ಲಿ ಓದಿ ಸಾಧನೆ ಮಾಡಿದವರು ಹಲವರಿದ್ದಾರೆ ಎಂದು ಹೇಳಿದರು.
ಸಾಹಿತಿ ಬಿ.ಎ. ವಿವೇಕ ರೈ ಅಭಿನಂದನಾ ಭಾಷಣ ಮಾಡಿದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಧರ್ಮದರ್ಶಿ ಹರಿಕೃಷ್ಣ ಪುನರೂರು, ತುಳುನಾಡು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ಪುರಾಣಿಕ್, ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಪ್ರಾಂಶುಪಾಲ ಜಾನ್ಸನ್ ಪಿಂಟೊ, ಕೇಶ ವಿನ್ಯಾಸ ವಿದ್ಯಾ ಸಂಸ್ಥೆಯ ಶಿವರಾಮ ಭಂಡಾರಿ, ಲೀಲಾ ಉಪಾಧ್ಯಾಯ ಉಪಸ್ಥಿತರಿದ್ದರು. ದಯಾನಂದ ಕಟೀಲ್ ಸನ್ಮಾನ ಪತ್ರ ವಾಚಿಸಿದರು. ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು.
ಗ್ರಾಮೀಣ ಭಾಗದಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಇಲ್ಲದಿದ್ದರೆ ನಾವೆಲ್ಲ ಶಿಕ್ಷಣ ವಂಚಿತರಾಗುತ್ತಿದ್ದೆವು. ಈಗ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವುದನ್ನು ಕಂಡಾಗ ಸಂಕಟವಾಗುತ್ತದೆ.ಬಿ.ಎ.ವಿವೇಕ ರೈ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.