ADVERTISEMENT

ಮಂಗಳೂರು | ಸದ್ಯದಲ್ಲಿಯೇ ಶಾಲಾ ಮಕ್ಕಳಿಗೆ ಶೂ, ಸಾಕ್ಸ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2023, 5:40 IST
Last Updated 22 ಜುಲೈ 2023, 5:40 IST
ಶಾಲಾ ಮಕ್ಕಳು (ಸಂಗ್ರಹ ಚಿತ್ರ)
ಶಾಲಾ ಮಕ್ಕಳು (ಸಂಗ್ರಹ ಚಿತ್ರ)   

ಮಂಗಳೂರು: ಈ ಬಾರಿ ಶಾಲೆಯ ಆರಂಭದಲ್ಲೇ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಪಡೆದಿದ್ದ ಸರ್ಕಾರಿ ಶಾಲೆ ಮಕ್ಕಳು ಇನ್ನು ಕೆಲವೇ ದಿನಗಳಲ್ಲಿ ಶೂ, ಸಾಕ್ಸ್ ಪಡೆಯಲಿದ್ದಾರೆ.

ಜಿಲ್ಲೆಯಲ್ಲಿ 901 ಸರ್ಕಾರಿ ಪ್ರಾಥಮಿಕ ಶಾಲೆಗಳು, 179 ಸರ್ಕಾರಿ ಪ್ರೌಢಶಾಲೆಗಳು ಇವೆ. ಈ ಶಾಲೆಗಳ ಒಂದರಿಂದ ಎಂಟನೇ ತರಗತಿವರೆಗಿನ ಒಟ್ಟು 80,335 ವಿದ್ಯಾರ್ಥಿಗಳು ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಪಡೆಯಲಿದ್ದಾರೆ. ಈ ಸಂಬಂಧ ಜಿಲ್ಲೆಗೆ ಒಟ್ಟು ₹2.19 ಕೋಟಿ ಅನುದಾನ ಬಿಡುಗಡೆಯಾಗಿದೆ. ನೇರವಾಗಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಖಾತೆಗೆ ವಾರದ ಹಿಂದೆ ಹಣ ಸಂದಾಯವಾಗಿದೆ.

ಸ್ಥಳೀಯವಾಗಿ ಇವನ್ನು ಖರೀದಿ ಅಧಿಕಾರವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ನೀಡಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಖರೀದಿ ಸಮಿತಿ ಅಧ್ಯಕ್ಷರಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿರುವ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಮೂವರು ಸದಸ್ಯರನ್ನು ಒಳಗೊಂಡ ಸಮಿತಿಗೆ ಶೂ, ಸಾಕ್ಸ್‌ಗಳನ್ನು ಖರೀದಿಸುವ ಹೊಣೆ ವಹಿಸಲಾಗಿದೆ. ಅಲ್ಲದೆ, ಉತ್ತಮ ಬ್ರ್ಯಾಂಡ್‌ನ ಗುಣಮಟ್ಟದ ಶೂ, ಸಾಕ್ಸ್‌ಗಳನ್ನು ಖರೀಸುವಂತೆ ಸೂಚಿಸಲಾಗಿದೆ.

ADVERTISEMENT

ಹಿಂದೆ ಇದ್ದ ದರವನ್ನೇ ಮುಂದುವರಿಸಲಾಗಿದ್ದು, 1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ₹265, 6ರಿಂದ 8ನೇ ತರಗತಿವರೆಗಿನ ಪ್ರತಿ ವಿದ್ಯಾರ್ಥಿಗೆ ₹295, 9 ಮತ್ತು 10ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ₹325 ನಿಗದಿ ಮಾಡಲಾಗಿದೆ.

‘9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಖರೀದಿಸುವ ಸಂಬಂಧ  ಅನುದಾನ ನಿಗದಿಯಾಗಿದ್ದು, ಇನ್ನಷ್ಟೇ ಬಿಡುಗಡೆ ಆಗಬೇಕಾಗಿದೆ. ಇವೆರಡು ತರಗತಿಗಳಿಂದ ಜಿಲ್ಲೆಯಲ್ಲಿ ಒಟ್ಟು 16,790 ಮಕ್ಕಳು ಇದ್ದಾರೆ. ಇವರ ಶೂ, ಸಾಕ್ಸ್ ಖರೀದಿಗೆ ₹62.01 ಲಕ್ಷ ಅನುದಾನ ಬೇಕಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಕಳೆದ ವರ್ಷ ತಡವಾಗಿ ಶೂ, ಸಾಕ್ಸ್‌ಗಳು ಬಂದಿದ್ದು, 2020–21 ಹಾಗೂ 2021–22ನೇ ಸಾಲಿನಲ್ಲಿ ಕೋವಿಡ್ ಕಾರಣಕ್ಕೆ ಮಕ್ಕಳಿಗೆ ಶೂ, ಸಾಕ್ಸ್‌ಗಳು ದೊರೆತಿರಲಿಲ್ಲ. ಶೂ ಖರೀದಿ ಪ್ರಕ್ರಿಯೆಯಲ್ಲಿ ಡಿಡಿಪಿಐಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಪಿ, ಬಿಆರ್‌ಪಿಗಳು ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವಂತಿಲ್ಲ. ಇಂತಹ ದೂರುಗಳು ಬಂದರೆ, ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ’ ಎಂದು ಶಾಲಾಭಿವೃದ್ಧಿ ಸಮಿತಿ ಪ್ರಮುಖರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.