ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ 15 ವರ್ಷಗಳ ಹಿಂದೆ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸದೆ, ಎಫ್‌ಐಆರ್ ದಾಖಲಿಸದೆಯೇ ಹೂತು ಹಾಕಲಾಗಿದೆ ಎಂದು ಆರೋಪಿಸಿ ಕಡಬ ತಾಲ್ಲೂಕಿನ ಇಚ್ಲಂಪಾಡಿ ಗ್ರಾಮದ ಜಯಂತ್ ಟಿ. ಎಂಬುವರು ನೀಡಿದ್ದ ದೂರನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಲಾಗಿದೆ.
‘ಜಯಂತ್ ಟಿ. ಅವರು ಧರ್ಮಸ್ಥಳ ಠಾಣೆಗೆ ನೀಡಿರುವ ದೂರನ್ನು (200/DPS/2025) ಮುಂದಿನ ವಿಚಾರಣೆಗಾಗಿ ಎಸ್ಐಟಿಗೆ ಹಸ್ತಾಂತರಿಸುವಂತೆ ಡಿಜಿಪಿ ಮತ್ತು ಐಜಿಪಿ ಎಂ.ಎ. ಸಲೀಂ ಆದೇಶ ಮಾಡಿದ್ದಾರೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮೂಲಗಳು ತಿಳಿಸಿವೆ.
ಧರ್ಮಸ್ಥಳ ಪ್ರಕರಣದ ಆರೋಪ ಕುರಿತು ಎಸ್‌ಐಟಿಯಿಂದ ನಡೆಯುತ್ತಿರುವ ಶೋಧಕಾರ್ಯ ಮಂಗಳವಾರವೂ ಮುಂದುವರಿಯಿತು. ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಗುರುವಾರ ಮೃತದೇಹದ ಅವಶೇಷ ಸಿಕ್ಕಿದ ಬಗ್ಗೆ ಅಸಹಜ ಸಾವು ಪ್ರಕರಣ (ಯುಡಿಆರ್) ದಾಖಲಾಗಿದೆ.
ಧರ್ಮಸ್ಥಳ ಸ್ನಾನಘಟ್ಟದ ಸಮೀಪ ರಾಜ್ಯ ಹೆದ್ದಾರಿ ಪಕ್ಕದ ಕಾಡಿನಲ್ಲಿ ಸಾಕ್ಷಿ ದೂರುದಾರ ತೋರಿಸಿರುವ 11ನೇ ಹಾಗೂ 12ನೇ ಜಾಗಗಳಲ್ಲಿ ಮಂಗಳವಾರ ಶೋಧ ನಡೆಯಿತು. ಈ ಜಾಗ ಹೆದ್ದಾರಿಯಿಂದ ಸುಮಾರು 20 ಮೀಟರ್ ದೂರದಲ್ಲಿ ಕಾಡಿನೊಳಗಿದೆ. ಶೋಧ ಕಾರ್ಯದ ದೃಶ್ಯ ಕಾಣಬಾರದೆಂದು ರಸ್ತೆ ಪಕ್ಕದಲ್ಲಿ ಉದ್ದಕ್ಕೂ ಹಸಿರು ಬಣ್ಣದ ಪರದೆ ಕಟ್ಟಲಾಗಿತ್ತು.
‘ಈ ಎರಡೂ ಜಾಗಗಳಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಈ ಪ್ರಕರಣದ ಸಾಕ್ಷಿ ದೂರುದಾರ, ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿಯಲ್ಲಿರುವ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದರು.
ಸಾಕ್ಷಿ ದೂರುದಾರ ಮೊದಲು 13, ಸೋಮವಾರ ಒಂದು ಸೇರಿ 14 ಜಾಗ ತೋರಿಸಿದ್ದರು. ಈ ಪೈಕಿ 12 ಕಡೆ ಶೋಧ ನಡೆದಿದೆ. ಆರನೇ ಜಾಗದಲ್ಲಿ ಒಂದು ಗಂಡಸಿನ ಮೃತದೇಹದ ಅವಶೇಷ ಹಾಗೂ ಸೋಮವಾರ ಶೋಧ ಕಾರ್ಯ ನಡೆಸಿದ 14ನೇ ಜಾಗದಲ್ಲಿ ಮೃತದೇಹದ ಅವಶೇಷಗಳು ಸಿಕ್ಕಿವೆ. ಉಳಿದ ಒಂಬತ್ತು ಕಡೆ ಯಾವುದೇ ಕುರುಹು ಸಿಕ್ಕಿರಲಿಲ್ಲ. ಈ ವರೆಗೆ ಸಾಕ್ಷಿ ದೂರುದಾರ ತೋರಿಸಿರುವ ಜಾಗಗಳಲ್ಲಿ ಒಂದು ಜಾಗ ಅಗೆಯುವುದು ಬಾಕಿ ಉಳಿದಿದೆ.
‘ಕಾಡಿನಲ್ಲಿ ಸೋಮವಾರ ಪತ್ತೆಯಾದ ಅವಶೇಷ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಗಂಡಸಿನದ್ದೋ, ಹೆಂಗಸಿನದ್ದೋ ಎಂಬುದು ವಿಧಿವಿಜ್ಞಾನ ತಜ್ಞರು ಪರಿಶೀಲಿಸಿದ ಬಳಿಕವೇ ಗೊತ್ತಾಗಲಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಎಫ್‌ಎಸ್‌ಎಲ್ ವರದಿ ತಯಾರಿ ಹೇಗೆ?
ಯಾವುದಾದರೂ ಪ್ರಕರಣಕ್ಕೆ ಸಂಬಂಧಿಸಿ ವಿಧಿವಿಜ್ಞಾನ ಪ್ರಯೋಗಾಲಯವು (ಎಫ್‌ಎಸ್‌ಎಲ್) ವರದಿಯನ್ನು ಸಿದ್ಧಪಡಿಸುವುದಕ್ಕೆ ಸಾಮಾನ್ಯವಾಗಿ ಒಂದರಿಂದ ಮೂರು ತಿಂಗಳು ಸಮಯ ತಗಲುತ್ತದೆ. ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಬೇಕಾದ ಪ್ರಮೇಯ ಅವುಗಳ ಸಂಕೀರ್ಣತೆಯ ಆಧರಿಸಿ ಕೆಲವೊಮ್ಮೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಕೆಲಸದ ಒತ್ತಡ ಹಾಗೂ ತಾಂತ್ರಿಕ ಸವಾಲುಗಳಿಂದಾಗಿ ವರದಿ ಸಿದ್ಧಪಡಿಸುವಾಗ ತಡವಾಗಲೂಬಹುದು. ಆದರೆ ಪ್ರಕರಣವು ಸರಳವಾಗಿದ್ದರೆ ತುರ್ತು ಅಗತ್ಯವಿದ್ದರೆ ವರದಿಯನ್ನು ಕೆಲವೇ ವಾರಗಳಲ್ಲಿ ಸಿದ್ಧಪಡಿಸಬಹುದು ಎಂದು ವಿಧಿವಿಜ್ಞಾನ ತಜ್ಞರೊಬ್ಬರು ಮಾಹಿತಿ ನೀಡಿದರು.
‘ಪ್ರಕರಣದ ತನಿಖೆ ವೇಳೆ ಪೊಲೀಸರು ಮೂಳೆ ಅಥವಾ ದೇಹದ ಅವಶೇಷಗಳನ್ನು ವಶಪಡಿಸಿಕೊಂಡರೆ ಅವುಗಳ ವೈಜ್ಞಾನಿಕ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಾರೆ. ಮೃತ ವ್ಯಕ್ತಿಯ ಗುರುತು ಪತ್ತೆ ಆ ವ್ಯಕ್ತಿ ಹೇಗೆ ಮೃತಪಟ್ಟ ಅದರ ಹಿಂದೆ ಯಾವುದಾದರೂ ಅಪರಾಧ ಕೃತ್ಯ ನಡೆದಿದೆಯೇ ಎಂಬುದನ್ನು ಪತ್ತೆ ಹಚ್ಚುವಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯವು ಮಹತ್ತರ ಪಾತ್ರ ವಹಿಸುತ್ತದೆ.’ ‘ದೇಹದ ಅವಶೇಷಗಳು ವಿಧಿ ವಿಜ್ಞಾನ ಪ್ರಯೋಗಾಲಯವನ್ನು ತಲುಪಿದ ಬಳಿಕ ಮೊದಲು ಮಾಡಬೇಕಾದುದು ಅವುಗಳ ಸಮರ್ಪಕವಾಗಿ ನೋಂದಾಯಿಸುವುದು ಮತ್ತು ಅವುಗಳ ಮಾದರಿಗಳನ್ನು ದಾಖಲಿಸುವುದು. ಆ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ ಹಾಗೂ ಅವುಗಳನ್ನು ತಿರುಚಲು ಅವಕಾಶ ಇಲ್ಲದಂತೆ ಸರಿಯಾದ ವಿಧಾನದಲ್ಲಿ ಸಂರಕ್ಷಿಸಲಾಗಿದೆ ಎಂಬುದನ್ನು ತಜ್ಞರ ತಂಡವು ಖಾತರಿಪಡಿಸಿಕೊಳ್ಳಬೇಕು.
ಮಾದರಿಗಳನ್ನು ಸಾಮಾನ್ಯವಾಗಿ ಪೊಲೀಸರ ಕೋರಿಕೆ ಪತ್ರದ ಮತ್ತು ಇತರ ಅಗತ್ಯ ಕಾಗದಪತ್ರಗಳ ಜೊತೆಗೆ ತಲುಪಿಸಲಾಗುತ್ತದೆ.’ ‘ನಂತರ ತಜ್ಞರ ತಂಡವು ಮೃತದೇಹದ ಅವಶೇಷಗಳ ಭೌತಿಕ ಪರಿಶೀಲನೆಯನ್ನು ನಡೆಸುತ್ತದೆ. ಮೃತದೇಹದ ಅವಶೇಷದಲ್ಲಿ ಸಿಕ್ಕ ಮೂಳೆಗಳು ಮನುಷ್ಯನದ್ದೋ ಅಥವಾ ಪ್ರಾಣಿಗಳದ್ದೋ ಎಷ್ಟು ಮೂಳೆಗಳಿವೆ ಅವು ಗಂಡಸಿನದ್ದೋ ಹೆಂಗಸಿನದ್ದೋ ಎಂಬುದನ್ನು ಅವರು ಪರೀಕ್ಷಿಸುತ್ತಾರೆ. ಅವರು ಮೃತ ವ್ಯಕ್ತಿಯ ವಯಸ್ಸು ಎತ್ತರ ಎಷ್ಟು ಎಂಬುದನ್ನು ಮೂಳೆಗಳ ಸಹಾಯದಿಂದ ಅಂದಾಜಿಸುತ್ತಾರೆ. ಆ ಮೂಳೆಗಳಲ್ಲಿ ಗಾಯಗಳು ಕಾಣಿಸುತ್ತವೆಯೇ ಸುಟ್ಟ ಗಾಯಗಳಿವೆಯೇ ಕಡಿತದ ಅಥವಾ ಇತರ ಭೌತಿಕ ಗಾಯಗಳ ಕುರುಹುಗಳಿವೆಯೇ ಎಂಬುದನ್ನು ಪರಿಶೀಲಿಸುತ್ತಾರೆ.’ ‘ಮೃತದೇಹದ ಅವಶೇಷಗಳ ಸ್ಥಿತಿ ಹಾಗೂ ಪ್ರಕರಣ ಯಾವ ತೆರನಾದದ್ದು ಎಂಬುದನ್ನು ಆಧರಿಸಿ ವಿಧಿ ವಿಜ್ಞಾನ ತಜ್ಞರು ಅನೇಕ ರೀತಿಯ ಪರೀಕ್ಷೆಗಳನ್ನು ನಡೆಸುತ್ತಾರೆ.
ವಂಶವಾಹಿ (ಡಿಎನ್‌ಎ) ಪರೀಕ್ಷೆ ವಿಷ ವಿಜ್ಞಾನ (ಟಾಕ್ಸಿಕಾಲಜಿ) ಪರೀಕ್ಷೆ ಮೂಳೆ ವಿಜ್ಞಾನಕ್ಕೆ ಸಂಬಂಧಿಸಿದ (ಆಸ್ಟಿಯಾಲಾಜಿಕಲ್) ಪರಿಶೀಲನೆ ಬಂದೂಕು ಮತ್ತು ಮದ್ದುಗುಂಡುಗಳಿಂದಾದ ಗಾಯಗಳಿಗೆ ಸಂಬಂಧಿಸಿದ ಪರೀಕ್ಷೆ (ಬ್ಯಾಲಿಸ್ಟಿಕ್ ಟೆಸ್ಟ್) ಸೂಕ್ಷ್ಮದರ್ಶಕ ಯಂತ್ರಗಳ ಮೂಲಕ ಜೀವಕೋಶಗಳ (ಹಿಸ್ಟೊಪ್ಯಾಥೊಲಜಿ) ಪರೀಕ್ಷೆ ಕೀಟವಿಜ್ಞಾನಕ್ಕೆ ಸಂಬಂಧಿಸಿದ (ಎಂಟಮಾಲಜಿ) ಪರೀಕ್ಷೆ ಬೆರಳಚ್ಚು ಮತ್ತು ಹಲ್ಲುಗಳ ವಿಶ್ಲೇಷಣೆ ನಡೆಸುವ ಮೂಲಕ ವ್ಯಕ್ತಿಯ ಗುರುತು ಪತ್ತೆಗೆ ಕ್ರಮವಹಿಸಲಾಗುತ್ತದೆ.’ ‘ನಿಖರವಾದ ಫಲಿತಾಂಶ ಪಡೆಯುವ ಉದ್ದೇಶದಿಂದ ಈ ಎಲ್ಲ ಪರೀಕ್ಷೆಗಳನ್ನೂ ವೈಜ್ಞಾನಿಕ ಸಲಕರಣೆಗಳನ್ನು ಬಳಸಿ ಪ್ರಮಾಣೀಕೃತ ವಿಧಾನಗಳನ್ನು ಅನುಸರಿಸಿ ತುಂಬಾ ಜಾಗರೂಕತೆಯಿಂದ ನಡೆಸಲಾಗುತ್ತದೆ.
ಪೊಲೀಸರು ವ್ಯಕ್ತಿಯ ಗುರುತು ಪತ್ತೆಹಚ್ಚಬೇಕು ಎಂದು ಬಯಸಿದರೆ ವಿಧಿವಿಜ್ಞಾನ ತಜ್ಞರು ಮೂಳೆಗಳಿಂದ ಅಥವಾ ಅಂಗಾಶಗಳಿಂದ ವಂಶವಾಹಿಗಳನ್ನು (ಡಿಎನ್‌ಎ) ಸಂಗ್ರಹಿಸಲು ಯತ್ನಿಸುತ್ತಾರೆ. ಮೂಳೆಯ ಚೂರನ್ನು (ಸಾಮಾನ್ಯವಾಗಿ ತೊಡೆ ಮೂಳೆ ಅಥವಾ ಹಲ್ಲಿನದು) ಪಡೆದು ಅದನ್ನು ಸ್ವಚ್ಛಗೊಳಿಸಿ ಅತ್ಯಾಧುನಿಕ ತಂತ್ರಗಳನ್ನು ಬಳಸಿ ವಂಶವಾಹಿಯನ್ನು ಪಡೆಯಲಾಗುತ್ತದೆ. ಗುರುತು ಖಾತರಿಪಡಿಸಿಕೊಳ್ಳಲು ನಿರ್ದಿಷ್ಟ ಕುಟುಂಬದ ಸದಸ್ಯರ ರಕ್ತದಿಂದ ಅಥವಾ ಬಾಯಿಯೊಳಗಿನಿಂದ ವಂಶವಾಹಿಯನ್ನು ಸಂಗ್ರಹಿಸಿ ಮೃತದೇಹದಿಂದ ಸಂಗ್ರಹಿಸಿದ ವಂಶವಾಹಿ ಜೊತೆ ತುಲನೆ ಮಾಡಲಾಗುತ್ತದೆ. ಈ ಎಲ್ಲ ಪರೀಕ್ಷೆಗಳನ್ನು ನಡೆಸಿದ ಬಳಿಕವಷ್ಟೇ ಪ್ರಕರಣಕ್ಕೆ ಸಂಬಂಧಿಸಿದ ವಿಸ್ತೃತ ವರದಿಯನ್ನು ಸಿದ್ದಪಡಿಸಲಾಗುತ್ತದೆ’ ಎಂದು ಅವರು ತಿಳಿಸಿದರು. ಈ ಎಲ್ಲ ಪರೀಕ್ಷೆಗಳ ಫಲಿತಾಂಶಗಳು ಅದಕ್ಕೆ ಬಳಸಿದ ವಿಧಾನಗಳನ್ನು ಈ ವರದಿಯಲ್ಲಿ ವಿವರಿಸಿ ತಜ್ಞರು ತಮ್ಮ ಅಭಿಪ್ರಾಯವನ್ನೂ ನೀಡುತ್ತಾರೆ. ಅ ವರದಿಯನ್ನು ಪೊಲೀಸರಿಗೆ ಕಳುಹಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.