ADVERTISEMENT

ದರೋಡೆಗೆ ಸಂಚು: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 3:05 IST
Last Updated 16 ಜುಲೈ 2022, 3:05 IST

ಮಂಗಳೂರು: ಕುದ್ರೋಳಿ ಮೊಯಿದ್ದೀನ್ ಮಸೀದಿ ಹಿಂಭಾಗದ ಪರಿಸರದಲ್ಲಿ ವ್ಯಾಪಾರಿಗಳನ್ನು ಬೆದರಿಸಿ ದರೋಡೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ನಗರದ ದಕ್ಷಿಣ ಠಾಣೆಯ ಪೊಲೀಸರು ನಾಲ್ವರನ್ನು ಗುರುವಾರ ಬಂಧಿಸಿದ್ದಾರೆ. ಸ್ಥಳದಲ್ಲಿದ್ದ ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.

ಕುದ್ರೋಳಿ ಜಂಕ್ಷನ್ ನಿವಾಸಿ ಅನಿಶ್ ಅಶ್ರಫ್ ಅಲಿಯಾಸ್‌ ಮಾಯಾ (24 ವರ್ಷ), ಬಜ್ಪೆ ಭಟ್ರಕೆರೆಯ ಶೇಖ್ ಮಹಮ್ಮದ್ ಹಾರಿಸ್ ಅಲಿಯಾಸ್‌ ಜಿಗರ್ (32), ಕಸಬಾ ಬೆಂಗ್ರೆಯ ಮಹಮ್ಮದ್ ಕೈಸ್ (26), ಕುದ್ರೋಳಿಯ ಮೊಹಮ್ಮದ್ ಕಾಮಿಲ್ (33) ಬಂಧಿತರು.

‘ಈ ಹಿಂದೆ ಅಪರಾಧ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅನಿಶ್ ಅಶ್ರಫ್‌ ಮತ್ತು ಅಬ್ದುಲ್ ಖಾದರ್ ಫಹಾದ್ ಸಹಚರರ ಕೂಟ ಕಟ್ಟಿಕೊಂಡು ಸಾರ್ವಜನಿಕರನ್ನು, ಶ್ರೀಮಂತರನ್ನು, ವ್ಯಾಪಾರಿಗಳನ್ನು ಬೆದರಿಸಿ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಬಗ್ಗೆ ಅಜೀಜುದ್ದೀನ್ ರಸ್ತೆ, ಕಂಡತ್ತ್ ಪಳ್ಳಿ ಪ್ರದೇಶದಿಂದ ಮಾಹಿತಿ ಬಂದಿತ್ತು. ಇದರ ಆಧಾರದಲ್ಲಿ ಮಧ್ಯಾಹ್ನ 2.30 ಗಂಟೆ ವೇಳೆಗೆ ಸ್ಥಳಕ್ಕೆ ಧಾವಿಸಿದಾಗ ಅನಿಶ್ ಅಶ್ರಪ್ ಮತ್ತು ಅಬ್ದುಲ್ ಖಾದರ್ ಫಹಾದ್ ಸಹಿತ ಆರು ಮಂದಿ ಮೊಯಿದ್ದೀನ್ ಮಸೀದಿಯ ಹಿಂಭಾಗದ ಖಾಲಿ ಜಾಗದಲ್ಲಿ ಗುಂಪು ಸೇರಿದ್ದರು. ಅವರಲ್ಲಿ ಮೂವರ ಬಳಿ ಮಾರಕಾಯುಧಗಳಿದ್ದವು. ಅವರನ್ನು ಹಿಡಿಯಲು ಮುಂದಾದಾಗ ತಲವಾರು ಹಿಡಿದುಕೊಂಡಿದ್ದ ಒಬ್ಬ ವ್ಯಕ್ತಿ ಮತ್ತು ಅಬ್ದುಲ್ ಖಾದರ್ ಫಹಾದ್ ಬೈಕ್‌ನಲ್ಲಿ ಪರಾರಿಯಾದರು. ಇನ್ನುಳಿದ ನಾಲ್ವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಶ್ರೀಮಂತ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡಲು ತಯಾರಿ ನಡೆಸುತ್ತಿದ್ದುದನ್ನು ಹಾಗೂ ಅದಕ್ಕಾಗಿ ತಲವಾರು, ಚೂರಿ ಮತ್ತು ಮೆಣಸಿನ ಹುಡಿ ಇಟ್ಟುಕೊಂಡಿದ್ದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.