ADVERTISEMENT

ನನ್ನ ಕಾದಂಬರಿಗಳ ಯಾವ ಪಾತ್ರವೂ ನನ್ನ ಮೇಲೆ ಪ್ರಭಾವ ಬೀರಿಲ್ಲ: ಭೈರಪ್ಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 12:50 IST
Last Updated 24 ಸೆಪ್ಟೆಂಬರ್ 2025, 12:50 IST
<div class="paragraphs"><p>ಮಂಗಳೂರು ಲಿಟ್‌ ಫೆಸ್ಟ್‌</p></div>

ಮಂಗಳೂರು ಲಿಟ್‌ ಫೆಸ್ಟ್‌

   

ಮಂಗಳೂರು: ಸಾಹಿತಿ ಎಸ್‌.ಎಲ್.ಭೈರಪ್ಪ ಅವರು 2025ರ ಜನವರಿ 11 ಮತ್ತು 12ರಂದು ಮಂಗಳೂರಿನಲ್ಲಿ ನಡೆದಿದ್ದ ಸಾಹಿತ್ಯ ಉತ್ಸವ ‘ಲಿಟ್‌ ಫೆಸ್ಟ್‌’ನಲ್ಲಿ ಎರಡೂ ದಿನ ಸಕ್ರಿಯವಾಗಿ ಭಾಗವಹಿಸಿದ್ದರು. ‌‌

ಜ.11ರಂದು ಲಿಟ್ ಫೆಸ್ಟ್ ಅನ್ನು ಉದ್ಘಾಟಿಸಿ ಮಾತನಾಡಿದ್ದ ಅವರು, ಮರುದಿನ ಒಂದು ತಾಸು ನಡೆದ ಸಾಹಿತ್ಯ ಸಂವಾದದಲ್ಲಿ, ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಸಾಹಿತ್ಯಾಸಕ್ತರೊಬ್ಬರು, ‘ನಿಮ್ಮ ಕಾದಂಬರಿಗಳಲ್ಲಿ ಬರುವ ಪಾತ್ರಗಳು ನಿಮ್ಮನ್ನು ಪ್ರಭಾವಿಸಿದ್ದವೇ’ ಎಂದು ಪ್ರಶ್ನಿಸಿದಾಗ, ‘ನನ್ನ ಕಾದಂಬರಿಗಳ ಯಾವ ಪಾತ್ರವೂ ನನ್ನ ಮೇಲೆ ಪ್ರಭಾವ ಬೀರಿಲ್ಲ. ಅವೆಲ್ಲವೂ ಕಾಲ್ಪನಿಕ ಪಾತ್ರಗಳು’ ಎಂದು ಎಸ್‌ಎಲ್‌.ಭೈರಪ್ಪ ಹೇಳಿದ್ದರು.

ADVERTISEMENT

‘ಪರ್ವ ಕಾದಂಬರಿ ಬರೆಯುವಾಗ ಸಾಕಷ್ಟು ಮಾನಸಿಕ ತುಮುಲ ಅನುಭವಿಸಿದ್ದೆ. ಬಳಿಕ ಮನೋವೈದ್ಯರು, ಬರವಣಿಗೆಯ ನಡುವೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆ ಸಲಹೆ ಪಾಲಿಸಿದ ಬಳಿಕ ಬರವಣಿಗೆ ಮುಂದುವರಿಸಲು ಸಾಧ್ಯವಾಯಿತು. ಯಾವುದೇ ಪಾತ್ರ ಸೃಷ್ಟಿಸಬಾರದಿತ್ತು ಎಂದು ನನಗೆ ಯಾವತ್ತೂ ಅನಿಸಿಲ್ಲ. ಆದರೆ ಈ ಇಳಿವಯಸ್ಸಿನಲ್ಲಿ ಅವಲೋಕನ ಮಾಡಿದಾಗ, ಚಿಕ್ಕ ವಯಸ್ಸಿನಲ್ಲಿ ಬರೆದ ‘ಭೀಮಕಾಯ’, ‘ಗತ ಜನ್ಮ’ ಮೊದಲಾದ ಕೆಲವು ಕಾದಂಬರಿಗಳು ಪೇಲವ ಅನಿಸುತ್ತದೆ. ಮೌಲ್ಯಗಳಿಲ್ಲದ ಕಾದಂಬರಿಯನ್ನು ನಾನು ಬರೆದೇ ಇಲ್ಲ. ನನ್ನ ಕಾದಂಬರಿಗಳಲ್ಲಿ ಸಕಾರಾತ್ಮಕ ಮೌಲ್ಯಗಳ ಜೊತೆಗೆ ನಕಾರಾತ್ಮಕ ಮೌಲ್ಯಗಳೂ ಇವೆ. ಜೀವನಾನುಭವ ಸಾಕಷ್ಟು ಇದ್ದುದರಿಂದ ಇಷ್ಟೆಲ್ಲ ಬರೆಯಲು ಸಾಧ್ಯವಾಯಿತು’ ಎಂದಿದ್ದರು.

ಸಂಗೀತ ಪ್ರೀತಿಯನ್ನು ಹಂಚಿಕೊಂಡಿದ್ದ ಭೈರಪ್ಪ,

‘ಹಿಂದೂಸ್ತಾನಿ ಸಂಗೀತವೆಂದರೆ ನನಗೆ ಅಚ್ಚುಮೆಚ್ಚು. ಈಗಲೂ ಹಿಂದೂಸ್ತಾನಿ ಹಾಡು ಕೇಳದಿದ್ದರೆ ನನಗೆ ತಲೆನೋವು ಬರುತ್ತದೆ.‌ ಬರೆಯುವಾಗ ಭಾವದ ಲಹರಿ ತಪ್ಪಿದರೆ, ಒಂದೆರಡು ಗಂಟೆ ಸಂಗೀತ ಆಲಿಸಿ ನಂತರ ಬರವಣಿಗೆ ಮುಂದುವರಿಸುತ್ತೇನೆ. ಅದರಲ್ಲೂ ಪುರುಷರ ಧ್ವನಿಗಿಂತ ಮಹಿಳೆಯ ಧ್ವನಿ ಇಷ್ಟ. ಮಹಿಳೆಯರ ಧ್ವನಿಯಲ್ಲಿ ಸಿಗುವ ಭಾವ ಶಾಂತಿ ಪುರುಷರ ಧ್ವನಿಯಲ್ಲಿ ಸಿಗದು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.