ADVERTISEMENT

‘ಅರಿವಿನ ಕೊರತೆ ಕೋಮುವಾದಕ್ಕೆ ಕಾರಣ’

​ಪ್ರಜಾವಾಣಿ ವಾರ್ತೆ
Published 27 ಮೇ 2022, 5:33 IST
Last Updated 27 ಮೇ 2022, 5:33 IST
ಮಂಗಳೂರಿನಲ್ಲಿ ಗುರುವಾರ ನಡೆದ ಸೌಹಾರ್ದ ಸಮ್ಮೇಳನದಲ್ಲಿ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ಮಾತನಾಡಿದರು.
ಮಂಗಳೂರಿನಲ್ಲಿ ಗುರುವಾರ ನಡೆದ ಸೌಹಾರ್ದ ಸಮ್ಮೇಳನದಲ್ಲಿ ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ಮಾತನಾಡಿದರು.   

ಮಂಗಳೂರು: ‘ಯುದ್ಧ ಮತ್ತು ಸಂಘರ್ಷ ಇಸ್ಲಾಮಿನ ಸಿದ್ಧಾಂತವಲ್ಲ. ಧಾರ್ಮಿಕ ನಂಬಿಕೆಯೂ ಅಲ್ಲ. ಅದನ್ನು ಯಾವ ಮುಸ್ಲಿಮನೂ ಅಂಗೀಕರಿಸುವುದಿಲ್ಲ’ ಎಂದು ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯ್ಯದ್ ಮುಹ್ಮಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.

ಎಸ್‌ಕೆಎಸ್ಸೆಸ್ಸೆಫ್ ಸಮಿತಿಯ ವತಿಯಿಂದ ಗುರುವಾರ ಇಲ್ಲಿ ನಡೆದ ಸೌಹಾರ್ದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುರಾನಿನ ಅಧ್ಯಾಯಗಳನ್ನು ತಪ್ಪು ವ್ಯಾಖ್ಯಾನಗೊಳಿಸಿ, ಇಸ್ಲಾಂ ಅನ್ನು ಕೋಮುವಾದಿಗಳ ಮತ್ತು ಭಯೋತ್ಪಾದಕರ ಧರ್ಮವನ್ನಾಗಿ ಬಿಂಬಿಸಲಾಗುತ್ತಿದೆ. ಧಾರ್ಮಿಕ ಅರಿವಿನ ಕೊರತೆಯೇ ಕೋಮುವಾದಕ್ಕೆ ಮೂಲ ಕಾರಣವಾಗಿದೆ ಎಂದರು.

ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪಕ್ಕೆ ಆಧಾರವಿಲ್ಲ. ಭಾರತಕ್ಕೆ ಇಸ್ಲಾಂ ಧರ್ಮ ಬಂದ ಸಂದರ್ಭದಲ್ಲೇ ಇಲ್ಲಿನ ಶಿಲ್ಪಿಗಳು ದೇವಾಲಯಗಳ ವಾಸ್ತುಶೈಲಿಯಲ್ಲೇ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನೀಗ ಕೆಲವರು ದೇವಸ್ಥಾನವೆಂದು ವಾದಿಸುವುದು ಖಂಡನೀಯ ಎಂದರು.

ADVERTISEMENT

ಅಬ್ದುಲ್ ರಶೀದ್ ಫೈಝಿ ವೆಳ್ಳಾಯಿಕ್ಕೋಡುಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸರ್ವಧರ್ಮ ಸಮನ್ವಯ ಸೌಹಾರ್ದ ಪೀಠ ಚಿತ್ರದುರ್ಗದ ಡಾ. ವಿಜಯಾನಂದ ಸ್ವಾಮೀಜಿ, ಚಿಕ್ಕಮಗಳೂರು ವಿಶ್ವ ಧರ್ಮ ಪೀಠದ ಡಾ.ಜಯಬಸವಾನಂದ ಸ್ವಾಮಿ, ಮಂಗಳೂರು ಕೋರ್ಡೆಲ್ ಚರ್ಚ್ ಧರ್ಮಗುರು ಕ್ಲಿಫರ್ಡ್ ಫರ್ನಾಂಡಿಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಮಾಜಿ ಸಚಿವ ರಮಾನಾಥ ರೈ ಇದ್ದರು. ಜಂಇಯ್ಯತುಲ್ ಖುತ್ಬಾದ ಜಿಲ್ಲಾ ಘಟಕದ ಅಧ್ಯಕ್ಷ ದ.ಕ. ಎಸ್.ಬಿ.ದಾರಿಮಿ ದಿಕ್ಸೂಚಿ ಭಾಷಣ ಮಾಡಿದರು. ಅನೀಸ್ ಕೌಸರಿ ಸ್ವಾಗತಿಸಿದರು. ರಶೀದ್ ರಹ್ಮಾನಿ ಕಾರ್ಯಕ್ರಮ ನಿರೂಪಿಸಿದರು. ಇಸ್ಮಾಯಿಲ್ ಯಮಾನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.