ADVERTISEMENT

ಎಸ್‌ಐಟಿಗೆ ದೂರು ಸಲ್ಲಿಸಿದ ಸೌಜನ್ಯಾ ತಾಯಿ

ಸಾಕ್ಷಿ ದೂರುದಾರನ ಮಂಪರು ಪರೀಕ್ಷೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 18:02 IST
Last Updated 28 ಆಗಸ್ಟ್ 2025, 18:02 IST
ಸೌಜನ್ಯಾ
ಸೌಜನ್ಯಾ   

ಮಂಗಳೂರು: 2012ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದ ಸೌಜನ್ಯಾ ಎಂಬ ಯುವತಿಯ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರು ಗುರುವಾರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದರು.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಧನದಲ್ಲಿರುವ ಸಾಕ್ಷಿ ದೂರುದಾರನಿಗೆ ಸೌಜನ್ಯಾ ಸಾವಿನ ಪ್ರಕರಣದ ಬಗ್ಗೆ ಮಾಹಿತಿ ಇದ್ದು, ಆ ವ್ಯಕ್ತಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘17 ವರ್ಷಗಳ ಹಿಂದೆ ನನ್ನ ಮಗಳು ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ. ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ಸಾಕ್ಷಿ ದೂರುದಾರ ವ್ಯಕ್ತಿಯ ಸಹೋದರಿಯು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಎದುರು ವಿಚಾರಣೆಗೆ ಹಾಜರಾದಾಗ, ‘ಸಾಕ್ಷಿ ದೂರುದಾರನಿಗೆ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ತಿಳಿದಿದ್ದು, ಆತನಿಗೆ ಜೀವ ಭಯ ಇತ್ತು. ಆ ಕಾರಣಕ್ಕೆ ಆತ ಇಲ್ಲಿಂದ ಹೋಗಬೇಕಾಯಿತು’ ಎಂದು ಹೇಳಿಕೆ ನೀಡಿರುವ ಮಾಹಿತಿ ನನಗೆ ಲಭ್ಯವಾಗಿದೆ. ಹೀಗಾಗಿ, ಸಾಕ್ಷಿ ದೂರುದಾರ ವ್ಯಕ್ತಿಯ ಮಂಪರು ಪರೀಕ್ಷೆ ನಡೆಸುವ ಮೂಲಕ ಸೌಜನ್ಯಾ ಸಾವಿಗೆ ನ್ಯಾಯ ಒದಗಿಸಬೇಕು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ದೂರನ್ನು ಸ್ವೀಕರಿಸಿದ ಎಸ್‌ಐಟಿ ಅಧಿಕಾರಿಗಳು, ಈಗಾಗಲೇ ತನಿಖೆ ನಡೆಸುತ್ತಿರುವ ಪ್ರಕರಣದ ಮುಂದುವರಿದ ತನಿಖೆಯ ಸಮಯದಲ್ಲಿ ಈ ಅರ್ಜಿಯನ್ನು ಪರಿಶೀಲಿಸಲಾಗುವುದು ಎಂದು ಹಿಂಬರಹ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.