ADVERTISEMENT

ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ಹೋರಾಟ: ವಸಂತ ಬಂಗೇರ

ಬೆಳ್ತಂಗಡಿಯಲ್ಲಿ ‘ಚಲೋ ಬೆಳ್ತಂಗಡಿ’ ಮಹಾಧರಣಿ ನಾಳೆ: ವಸಂತ ಬಂಗೇರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 15:32 IST
Last Updated 26 ಆಗಸ್ಟ್ 2023, 15:32 IST
   

ಬೆಳ್ತಂಗಡಿ: ‘ಸೌಜನ್ಯಾಳ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನಪರ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಆ.28ರಂದು ಬೆಳ್ತಂಗಡಿ ತಾಲ್ಲೂಕು ಕಚೇರಿ ಎದುರು ಮಹಾಧರಣಿ ನಡೆಯಲಿದ್ದು, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ನಮ್ಮ ಹೋರಾಟ’ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸೌಜನ್ಯಾ ಹತ್ಯೆಯಾದ ಸಂದರ್ಭ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರ ನೇತೃತ್ವದ ಸರ್ಕಾರ ಸಿಐಡಿ ತನಿಖೆ ಮಾಡಿಸಿಯೂ ಸಂತೋಷ್ ರಾವ್‌ ಆರೋಪಿ ಎಂದು ಹಠ ಹಿಡಿದಾಗ ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡ ಜನ ಸಿಬಿಐ ತನಿಖೆಗೆ ಆಗ್ರಹಿಸಿದ್ದರು. ಬಳಿಕ ಸಿದ್ದಾರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಆದರೆ, ಪ್ರಕರಣ ನಡೆದು ಇಷ್ಟು ವರ್ಷವಾದರೂ ಶಾಸಕ ಹರೀಶ್ ಪೂಂಜ ವಿಧಾನ ಸಭೆಯಲ್ಲಾಗಲಿ, ಪ್ರತಾಪಸಿಂಹ ನಾಯಕ್ ವಿಧಾನ ಪರಿಷತ್‌ನಲ್ಲಾಗಲಿ, ಸಂಸದ ನಳಿನ್‌ಕುಮಾರ್ ಕಟಿಲ್ ಸಂಸತ್‌ನಲ್ಲಾಗಲಿ ಈ ವಿಷಯ ಪ್ರಸ್ತಾಪಿಸಿಲ್ಲ ಎಂದು ಅವರು ಆರೋಪಿಸಿದರು.

ಇದೀಗ ಸಿಬಿಐ ನ್ಯಾಯಾಲಯ ತನ್ನ ತನಿಖಾ ವರದಿಯಲ್ಲಿ ಸಂತೋಷ್ ರಾವ್ ನಿರಪರಾಧಿ ಎಂದು ಸಾಬೀತು ಮಾಡಿದೆ. ಆದರೆ, ನಿಜವಾದ ಆರೋಪಿಯ ಪತ್ತೆಗೆ ಸಿಬಿಐ ತನಿಖೆ ನಡೆಸಿಲ್ಲ. ನಮಗೆ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ರಾಜ್ಯ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಪ್ರಕರಣದ ಮರುತನಿಖೆ ಮಾಡಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಯನ್ನೂ ಭೇಟಿ ಒತ್ತಾಯಿಸಿದ್ದೇನೆ ಎಂದರು.

ADVERTISEMENT

ಪ್ರಕರಣದಲ್ಲಿ ಪೊಲೀಸರು, ವೈದ್ಯರು, ಅಧಿಕಾರಿಗಳನ್ನು ತನಿಖೆ ನಡೆಸಬೇಕು ಎಂದು ನಮ್ಮ ಒತ್ತಾಯವಾಗಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಸಹಜ ಸಾವುಗಳ, ಅಪರಾಧಿಗಳು ಪತ್ತೆಯಾಗದ ಕೊಲೆಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದೂ ಒತ್ತಾಯಿಸಲಿದ್ದೇವೆ. ಸೌಜನ್ಯಾಗೆ ನ್ಯಾಯ ಸಿಗದಂತೆ ಮಾಡುವ ಶಕ್ತಿಗಳು, ತಾಲ್ಲೂಕಿನ ಕೊಲೆಗಳ ತನಿಖೆ ನಡೆಸುವುದುನ್ನು ವಿರೋಧಿಸುವವರು ಇಲ್ಲಸಲ್ಲದ ಆರೋಪ ಮಾಡುತ್ತಿರುತ್ತಾರೆ ಎಂದರು.

ಕರ್ನಾಟಕ ರಾಜ್ಯ ಜನಪರ ಸಂಘಟನೆಗಳ ಜಂಟಿ ವೇದಿಕೆಯ ಸಂಚಾಲಕ ಬಿ.ಎಂ.ಭಟ್ ಮಾತನಾಡಿದರು

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್, ಜೆಡಿಎಸ್ ಮುಖಂಡ ಧರ್ಮರಾಜ್, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನಿರ್ ಕಾಟಿಪಳ್ಳ, ವಕೀಲ ಮನೋಹರ ಇಳಂತಿಲ, ಡಿಎಸ್ಎಸ್ ಮುಖಂಡರಾದ ನೇಮಿರಾಜ ಕಿಲ್ಲೂರು, ವಸಂತ ಬಿ.ಕೆ., ಪ್ರಮುಖರಾದ ಧರಣೇಂದ್ರ ಕುಮಾರ್, ಶೇಖರ ಕುಕ್ಕೇಡಿ, ಜಯವಿಕ್ರಮ್ ಕಲ್ಲಾಪು, ಸಂತೋಷ್ ಕುಮಾರ್, ಬೊಮ್ಮಣ್ಣ ಗೌಡ, ಸಂತೋಷ್ ಬಿ.ಸಿ., ಆದಿತ್ಯ ಕೊಲ್ಲಾಜೆ ಇದ್ದರು.

ಧರ್ಮಸ್ಥಳ– ನಾರಾವಿ ಸರ್ಕಾರಿ ಬಸ್ ನನ್ನ ಶಿಫಾರಸು: ಧರ್ಮಸ್ಥಳದಿಂದ ನಾರಾವಿಗೆ ಕೆಎಸ್‌ಆರ್‌ಟಿಸಿ ಬಸ್ ಮಂಜೂರು ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನಾನು ಪತ್ರ ಬರೆದಿದ್ದೆ. ಬಸ್‌ ಮಂಜೂರುಗೊಂಡ ಬಳಿಕ ಶಾಸಕ ಹರೀಶ್‌ ಪೂಂಜಾ ಅವರು ತನ್ನ ಶಿಫಾರಸ್ಸಿನಂತೆ ಬಸ್‌ ಮಂಜೂರುಗೊಂಡಿದೆ ಎಂದು ಹೇಳಿದ್ದಾರೆ. ಅದು ಹೌದಾಗಿದ್ದರೆ ಅವರು ಧರ್ಮಸ್ಥಳದ ಮಂಜುನಾಥ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ. ಬಸ್‌ ಮಂಜೂರು ಮಾಡಿಸಿದ್ದು ನಾನೇ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದು ವಸಂತ ಬಂಗೇರ ಸವಾಲು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.