ಮುಡಿಪು: ಕಾರವಾರ ಮೂಲದ ಮಹಿಳೆಯೊಬ್ಬರು ಅನಾರೋಗ್ಯದಿಂದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಅವರ ಶವವನ್ನು ತವರೂರಿಗೆ ಸಾಗಿಸಲು ಹಣವಿಲ್ಲದೆ ಪರದಾಡುತ್ತಿದ್ದ ಕುಟುಂಬಕ್ಕೆ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ನೆರವಾಗಿದ್ದಾರೆ.
ಅಸೈಗೋಳಿಯ ಕೆಎಸ್‌ಆರ್‌ಪಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದ ಕಾರವಾರ ಬಾವಲ್ ಗ್ರಾಮದ ಮೂಲದ ಗೋವಿಂದ ಟಿ.ಸಾಲಿ ಎಂಬುವರ ಪುತ್ರಿ ವಿದ್ಯಾ ವಿಕ್ರಮ್ ಅಂಬಿಗ್ (33) ಎಂಬುವರು ಕಾಮಾಲೆ ರೋಗಕ್ಕೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿ ಮೃತಪಟ್ಟಿದ್ದರು.
ಶವವನ್ನು ಊರಿಗೆ ಸಾಗಿಸಲು ಪರದಾಡುತ್ತಿದ್ದ ಕುಟುಂಬದ ಬಗ್ಗೆ ಕೊಣಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಝರ್ ಷಾ ಅವರು ಯು.ಟಿ.ಖಾದರ್ ಅವರಿಗೆ ತಿಳಿಸಿದ್ದು, ಆಸ್ಪತ್ರೆಗೆ ಪಾವತಿಸಿದ್ದ ಮೊತ್ತವನ್ನು ವಾಪಸ್ ಕೊಡಿಸಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ಶವ ಕೊಂಡೊಯ್ಯಲು ಸಹಕರಿಸಿದ್ದಾರೆ.
ಗೋವಿಂದ ಅವರು ಕೆಎಸ್‌ಆರ್‌ಪಿ ಬೆಟಾಲಿಯನ್‌ನಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದಾಗಿ ಕೆಲಸಕ್ಕೆ ತೆರಳಲಾಗದೆ 5 ವರ್ಷಗಳಿಂದ ಕೊಣಾಜೆಯ ಕುಂಟಾಲಗುಳಿ ಬಳಿ ಸಣ್ಣ ಬಾಡಿಗೆ ಮನೆಯಲ್ಲಿ ನಾಲ್ವರು ಪುತ್ರಿಯರೊಂದಿಗೆ ವಾಸವಾಗಿದ್ದರು. ಈ ಪೈಕಿ ಇಬ್ಬರು ಪುತ್ರಿಯರಿಗೆ ವಿವಾಹವಾಗಿದ್ದರೂ, ತಂದೆಯ ಜತೆಗೆ ವಾಸವಾಗಿದ್ದರು. ಹಿರಿಯ ಈಗ ಮೃತಪಟ್ಟಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.