ADVERTISEMENT

ಉಳ್ಳಾಲ: ಕಡಲ್ಕೊರೆತ ಪೀಡಿತ ಪ್ರದೇಶಕ್ಕೆ ಸ್ಪೀಕರ್ ಯು.ಟಿ.ಖಾದರ್ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:31 IST
Last Updated 21 ಜೂನ್ 2025, 14:31 IST
ಮೊಗವೀರಪಟ್ನ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್‌ ಯು.ಟಿ.ಖಾದರ್‌ ಭೇಟಿ ನೀಡಿದರು
ಮೊಗವೀರಪಟ್ನ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್‌ ಯು.ಟಿ.ಖಾದರ್‌ ಭೇಟಿ ನೀಡಿದರು   

ಉಳ್ಳಾಲ: ಇಲ್ಲಿನ ಕಡಲ್ಕೊರೆತ ಪೀಡಿತ ಐದು ಪ್ರದೇಶಗಳಲ್ಲಿ ಕಲ್ಲು ಹಾಕುವ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಊರವರು ಹಾಗೂ ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಕಾಮಗಾರಿಗಳ ಪರಿಶೀಲನೆ ನಡೆಸಬೇಕು. ತದನಂತರವೂ ದೂರು ಬಂದಲ್ಲಿ ಮೂರನೇ ನಿಯೋಗವನ್ನು ರಚಿಸಿ ಪರಿಶೀಲನೆ ನಡೆಸಿದ ನಂತರವೇ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.

ಉಳ್ಳಾಲದ ಕಡಲ್ಕೊರೆತ ಬಾಧಿತ ಕೋಟೆಪುರ, ಕೋಡಿ, ಮೊಗವೀರಪಟ್ನ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಹಿಲೆರಿಯಾನಗರ, ಕೈಕೋ, ಸೋಮೇಶ್ವರ ಬೆಟ್ಟಂಪಾಡಿ, ಕೋಡಿ, ಮೊಗವೀರಪಟ್ನ ಮತ್ತು ಉಚ್ಚಿಲ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದೆ. ಶಾಶ್ವತ ಪರಿಹಾರ ಕಂಡುಕೊಂಡ ಹಿನ್ನೆಲೆಯಲ್ಲಿ ಕೆಲ ಕಾಲ ಸಂರಕ್ಷಿತವಾಗಿತ್ತು. ಬಹಳ ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಸಮುದ್ರದ ಅಲೆಗಳಲ್ಲಿ ವ್ಯತ್ಯಾಸ ಬರುವುದು ಸ್ವಾಭಾವಿಕ . ಅದಕ್ಕಾಗಿ ಕಳೆದ ಬಾರಿ ಊರಿನವರ ಸಮ್ಮುಖದಲ್ಲಿ ಬೇಕಾದ ಅನುದಾನದದ ರೂಪುರೇಷೆ ತಯಾರಿಸಿ ಸಂಬಂಧಿಸಿದ ಮೀನುಗಾರಿಕಾ ಮತ್ತು ಬಂದರು ಇಲಾಖೆಗಳ ಸಚಿವ ಮಾಂಕಳ್ ವೈದ್ಯ ಹಾಗೂ ಮುಖ್ಯಮಂತ್ರಿಗೆ ಜತೆ ಸಭೆ ನಡೆಸಿ ಒಂದು ವರ್ಷದ ಮುಂಚೆಯೇ ಅನುದಾನ ಬಿಡುಗಡೆ ಮಾಡಿಸಿ ವ್ಯವಸ್ಥಿತವಾಗಿ ಕೋಟೆಪುರ, ಮೊಗವೀರಪಟ್ನ, ಸೀಗ್ರೌಂಡ್, ಬಟ್ಟಂಪಾಡಿ, ಉಚ್ಚಿಲ ಐದು ಕಡೆಗಳಲ್ಲಿ ಕೆಲಸ ಆರಂಭಿಸಲಾಗಿದೆ. ಕಾಮಗಾರಿ ಪರಿಶೀಲನೆಗೆ ಊರವರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದರು.

ADVERTISEMENT

ಈ ಸಂದರ್ಭ ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸ್ವಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ನಾಮನಿರ್ದೇಶಿತ ಸದಸ್ಯ ರಶೀದ್ ಯೂಸುಫ್, ನಗರಸಭೆ ಆಯುಕ್ತ ನವೀನ್ ಹೆಗ್ಡೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು, ಮುಡಾ ಸಲಹಾ ಸಮಿತಿ ಮಾಜಿ ಸದಸ್ಯ ಮುರಳೀಧರ್ ಸಾಲ್ಯಾನ್, ಜಿ.ಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ಉಳ್ಳಾಲ ನಗರಸಭೆ ಮಾಜಿ ಸದಸ್ಯರಾದ ದಿನೇಶ್ ರೈ, ಮುಸ್ತಾಫ ಅಬ್ದುಲ್ಲಾ, ಕಿನ್ಯಾ ಗ್ರಾ.ಪಂ ಸದಸ್ಯ ಸಿರಾಜ್ ಕಿನ್ಯಾ, ಕೋಟೆಪುರ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ, ಹಮೀದ್ ಕೋಡಿ, ಸಫ್ವಾನ್ ಕೆರೆಬೈಲ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.