ADVERTISEMENT

ವಿನಾಯಕ ಬಾಳಿಗ ಹತ್ಯೆ ಪ್ರಕರಣ: ಎಸ್‌ಪಿಪಿ ನೇಮಕ ರದ್ದು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:50 IST
Last Updated 20 ಅಕ್ಟೋಬರ್ 2021, 16:50 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್(ಎಸ್‌ಪಿಪಿ) ಆಗಿದ್ದ ಎನ್.ರವೀಂದ್ರನಾಥ ಕಾಮತ್ ಅವರ ನೇಮಕವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಕೊಡಿಯಾಲ್ ಬೈಲ್‌ ಬಳಿ 2016ರಲ್ಲಿ ವಿನಾಯಕ ಬಾಳಿಗ ಹತ್ಯೆಯಾಗಿತ್ತು. ಮಂಗಳೂರಿನ ಬರ್ಕೆ ಠಾಣೆ ಪೊಲೀಸರು ಪ್ರಮುಖ ಆರೋಪಿ ಉದ್ಯಮಿ ನರೇಶ್ ಎಂ. ಶೆಣೈ ಸೇರಿ ಮೂವರನ್ನು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ವಕೀಲ ರವೀಂದ್ರನಾಥ್ ಕಾಮತ್ ಅವರನ್ನು ಎಸ್‌ಪಿಪಿಯಾಗಿ 2016ರ ನ. 21ರಂದು ನೇಮಕ ಮಾಡಲಾಗಿತ್ತು.

ನೇಮಕಾತಿ ಪ್ರಶ್ನಿಸಿದ್ದ ನರೇಶ್ ಶೆಣೈ, ‘ರವೀಂದ್ರನಾಥ ಕಾಮತ್ ಅವರು ಮೃತ ವ್ಯಕ್ತಿಯ ಪರ ವಕೀಲರಾಗಿದ್ದು, ಅವರ ಮೃತಪಟ್ಟ ಬಳಿಕ ದೂರು ನೀಡಿರುವ ತಂದೆ ರಾಮಚಂದ್ರ ಬಾಳಿಗ ಮತ್ತು ಸಹೋದರಿ ಅನುರಾಧ ಬಾಳಿಗ ಪರ ವಕೀಲರಾಗಿದ್ದರು. ಅಲ್ಲದೇ ಮೃತ ಬಾಳಿಗ ಪರವಾಗಿ ಹಲವು ಬಾರಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ’ ಎಂದು ತಿಳಿಸಿದ್ದರು.

ADVERTISEMENT

‘ಆಧಾರ ರಹಿತ ಆರೋಪವನ್ನು ಅರ್ಜಿದಾರರು ಮಾಡಿದ್ದಾರೆ. ಕ್ಷುಲ್ಲಕ ಆಕ್ಷೇಪಣೆಗಳನ್ನು ಮಾಡುವ ಮೂಲಕ ವಿಚಾರಣೆಯನ್ನು ವಿಳಂಬ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸರ್ಕಾರದ ಪರ ವಕೀಲರು ವಾದಿಸಿದರು.

‘ನ್ಯಾಯಯುತ ವಿಚಾರಣೆ ಎಂದರೆ ಅದು ಸಂತ್ರಸ್ತರ ಪರವಾಗಿಯಷ್ಟೇ ಇರಬೇಕೆಂದಲ್ಲ. ಆರೋಪಿಗಳಿಗೂ ನ್ಯಾಯಯುತವಾಗಿರಬೇಕು’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.