ADVERTISEMENT

ಸತ್ಯ ಸಂಗತಿ ಪಸರಿಸಿ ದ್ವೇಷ ಪ್ರಸಾರ ತಡೆಯಿರಿ

ಇತಿಹಾಸ ತಜ್ಞ ರಾಮ್ ಪುನಿಯಾನಿ ಸಲಹೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 3:13 IST
Last Updated 13 ನವೆಂಬರ್ 2025, 3:13 IST
ಮಂಗಳೂರಿನಲ್ಲಿ ಶಾಂತಿ ಪ್ರಕಾಶನವು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಬ್ದುಲ್ ಲತೀಫ್‌ ಅಲಿಯ, ಪ್ರೊ.ಸೈಯದ್ ಅಕೀಲ್ ಅಹಮದ್‌, ಪುರುಷೋತ್ತಮ ಬಿಳಿಮಲೆ, ಅಬ್ದುಸ್ಸಲಾಂ ಪುತ್ತಿಗೆ, ಮಹಮ್ಮದ್ ಕುಞಿ ಮತ್ತಿತರರು ಭಾಗವಹಿಸಿದ್ದರು
ಮಂಗಳೂರಿನಲ್ಲಿ ಶಾಂತಿ ಪ್ರಕಾಶನವು ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಬ್ದುಲ್ ಲತೀಫ್‌ ಅಲಿಯ, ಪ್ರೊ.ಸೈಯದ್ ಅಕೀಲ್ ಅಹಮದ್‌, ಪುರುಷೋತ್ತಮ ಬಿಳಿಮಲೆ, ಅಬ್ದುಸ್ಸಲಾಂ ಪುತ್ತಿಗೆ, ಮಹಮ್ಮದ್ ಕುಞಿ ಮತ್ತಿತರರು ಭಾಗವಹಿಸಿದ್ದರು   

ಮಂಗಳೂರು: ‘ಕೆಲ ಸಂಘಟನೆಗಳು ಟಿ.ವಿ. ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಲಿಂ ದ್ವೇಷ ಹರಡಿ ದೇಶವನ್ನು ಧ್ರುವೀಕರಿಸುತ್ತಿವೆ. ಹಿಂದೂ ಮುಸ್ಲಿಮರ ನಡುವೆ ದ್ವೇಷದ ಗೋಡೆ ಕಟ್ಟುತ್ತಿವೆ. ಇತಿಹಾಸದ ಸತ್ಯ ಸಂಗತಿಗಳನ್ನು ಜನರಿಗೆ ಎಳೆ ಎಳೆಯಾಗಿ ಬಿಡಿಸಿ ಹೇಳದಿದ್ದರೆ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತವೆ’ ಎಂದು ಮುಂಬೈನ ಇತಿಹಾಸ ತಜ್ಞ ರಾಮ್ ಪುನಿಯಾನಿ ಎಚ್ಚರಿಸಿದರು.

ಶಾಂತಿ ಪ್ರಕಾಶನದ ವತಿಯಿಂದ ಇಲ್ಲಿ ಬುಧವಾರ ಏರ್ಪಡಿಸಿದ್ದ ‘ಭಾರತದ ಇತಿಹಾಸ ಮತ್ತು ಮುಸ್ಲಿಮರು’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. 

‘ದೇಶದ ಸ್ವಾತಂತ್ರ್ಯ ಸಮರದಲ್ಲಿ ಮುಸ್ಲಿಮರು ಹಿಂದೂಗಳಿಗಿಂತಲೂ ಹೆಚ್ಚು ಕೆಚ್ಚಿನಿಂದ ಹೋರಾಡಿದ್ದಾರೆ. ದೇಶ ವಿಭಜನೆ ತಡೆಯುವ ಪ್ರಯತ್ನವನ್ನು ಅಲ್ಲಾ ಭಕ್ಷ್‌, ಮೌಲಾನ ಅಬುಲ್ ಕಲಾಂ ಆಜಾದ್‌ ಅವರಂತಹ ನಾಯಕರು ಮಾಡಿದ್ದಾರೆ. ಭಾರತದ ಮುಸ್ಲಿಮರು ಯಾರ ಔದಾರ್ಯದಿಂದಲೂ ಬದುಕುತ್ತಿಲ್ಲ. ಸಂವಿಧಾನದ ಬಲದಿಂದ ಈ ದೇಶದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದರು. 

ADVERTISEMENT

‘ಇತಿಹಾಸದಲ್ಲಿ ಯಾವ ರಾಜರೂ ಧರ್ಮ ರಕ್ಷಣೆಗಾಗಿ ಯುದ್ಧ ಮಾಡಲಿಲ್ಲ. ಯುದ್ಧಗಳು ನಡೆದದ್ದು ಅಧಿಕಾರ ಹಾಗೂ ಸಂಪತ್ತಿಗಾಗಿ. ಮುಸ್ಲಿಂ ರಾಜರ ಸೈನ್ಯದಲ್ಲಿ ಹಿಂದೂ ಸೇನಾಪತಿಗಳು, ಹಿಂದೂ ರಾಜದ ಸೇನೆಗಳಲ್ಲಿ ಮುಸ್ಲಿಂ ಸೇನಾಪತಿಗಳಿದ್ದುದು ಐತಿಹಾಸಿಕ ಸತ್ಯ. ಔರಂಗಜೇಬ್‌ ಮಂದಿರಗಳನ್ನು ಧ್ವಂಸ ಮಾಡಿದ್ದು ನಿಜ. ಆದರೆ, ಆತ ನೂರಾರು ಮಂದಿರಗಳನ್ನೂ ಪೋಷಿಸಿದ್ದನ್ನು ಬೇಕೆಂದೇ ಹೇಳುವುದಿಲ್ಲ. ರಾಜಾ ಜಯಸಿಂಗ್ ಔರಂಗಜೇಬನ ಸೇನಾಪತಿಯಾಗಿದ್ದನ್ನು, ಶಿವಾಜಿ ಸೈನ್ಯದಲ್ಲಿ ಮುಸ್ಲಿಂ ಸೇನಾಪತಿಗಳಿದ್ದುದನ್ನು ಬೇಕೆಂದೇ ಮರೆಮಾಚಲಾಗುತ್ತಿದೆ. ನಾವು ಇತಿಹಾಸದ ಸತ್ಯಗಳ ಎರಡೂ ಮುಖಗಳನ್ನು ನಿಷ್ಕರ್ಷೆಗೆ ಒಳಪಡಿಸಬೇಕು’ ಎಂದರು.

‘ಸೋಮನಾಥ ದೇವಸ್ಥಾನವನ್ನು ಕೆಡವಿದ ಮಹಮ್ಮದ್‌ ಘಜ್ನಿ ದಾರಿಯಲ್ಲಿ ಸಿಕ್ಕ ನೂರಾರು ಮಂದಿರಗಳನ್ನು ಹಾಗೆಯೇ ಬಿಟ್ಟಿದ್ದ. ಸೋಮನಾಥ ಮಂದಿರದಲ್ಲಿ ಸಂಪತ್ತು ಇದ್ದ ಕಾರಣ ಅದನ್ನು ಧ್ವಂಸ‌ ಮಾಡಿದ್ದ.‌ ದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಅತಿ ಹೆಚ್ಚು ದಾಳಿ ಮಾಡಿದ್ದು ಕಾಶ್ಮೀರದ ದೊರೆ ಹರ್ಷದೇವ. ರಾಜತರಂಗಿಣಿ ಕೃತಿಯಲ್ಲೇ ಈ ಬಗ್ಗೆ ಉಲ್ಲೇಖಗಳಿವೆ’ ಎಂದರು.  

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಎನ್‌ಸಿಇಆರ್‌ಟಿಯ ಸಮಾಜ ಪಠ್ಯದಲ್ಲಿ ದೇಶದ ಮಹಾನ್ ಸಾಮ್ರಾಟರ ಕುರಿತ ಪಠ್ಯದಲ್ಲಿ ಮೊಗಲರ ಉಲ್ಲಖವೇ ಇಲ್ಲ. ಬಾಬರ್, ಅಕ್ಬರ್, ಷಹಜಹಾನ್‌ ಮೊದಲಾದ ದೊರೆಗಳ ಕುರಿತು ಒಳ್ಳೆಯ ಮಾತುಗಳನ್ನು ಬರೆಯದಿದ್ದರೂ ಪರವಾಗಿಲ್ಲ, ಆದರೆ ಅವರ ಆಳ್ವಿಕೆಯನ್ನೇ ಉಲ್ಲಖಿಸದಿದ್ದರೆ ಅದು ಇತಿಹಾಸಕ್ಕೆ ಎಸಗುವ ಅಪಚಾರ. ಇತಿಹಾಸ ಕಣ್ಣಿನ ದೂಳಾಗುವುದು ಬೇಡ.‌ ಇತಿಹಾಸ ಬೆಳಕಾಗಲಿ’ ಎಂದರು.

ಯೆನೆಪೋಯ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಪ್ರೊ.ಸೈಯದ್‌ ಅಕೀಲ್ ಅಹಮದ್ ಕಾರ್ಯಕ್ರಮ ಉದ್ಘಾಟಿಸಿದರು. ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.   

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಞಿ ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಸ್ಸಲಾಂ ಯು. ಧನ್ಯವಾದ ಸಲ್ಲಿಸಿದರು. ಮಹಮ್ಮದ್ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು. ಅಬದುಲ್ ಲತೀಫ್‌ ಅಲಿಯ ಕಿರಾತ್ ಪಠಿಸಿದರು. 

ಮಾಜಿ ಸಚಿವ ಬಿ.ರಮಾನಾಥ ರೈ, ಮುಫ್ತಿ ಶೇಖ್‌ ಮುತಹರ್ ಹುಸೈನ್ ಖಾಸಿಮಿ, ಯಾಹ್ಯಾ ತಂಙಳ್ ಮದನಿ, ಕೆ.ಎಂ.ಅಶ್ರಫ್‌, ಸಯೀದ್ ಇಸ್ಮಾಯಿಲ್‌, ಅರಾಫ ಮಂಚಿ ಮೊದಲಾದವರು ಭಾಗವಹಿಸಿದ್ದರು

ಸಮನ್ವಯ ಸಂಸ್ಕೃತಿ ಸರಣಿಯಲ್ಲಿ 100 ಪುಸ್ತಕ’

‘ಇತಿಹಾಸ ಒಳ್ಳೆಯ ವಿಚಾರಗಳನ್ನು ಹೆಕ್ಕಿ ತೆಗೆದು ‘ಕರ್ನಾಟಕದ ಸಮನ್ವಯ ಸಂಸ್ಕೃತಿ’ ಸರಣಿಯಲ್ಲಿ 100 ಕಿರು ಪುಸ್ತಕಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪ್ರಕಟಿಸಲಿದೆ. ಇದರ  40 ಪುಸ್ತಕಗಳು ಸಜ್ಜಾಗಿವೆ’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.   ‘ಕರಾವಳಿಗೆ ಮೊದಲ ಹಡಗು ಬಂದ ಬಳಿಕ ಇಲ್ಲಿನ ಜೇಡಿಮಣ್ಣು ವಿದೇಶಕ್ಕೆ ರಫ್ತಾಗುತ್ತಿದ್ದುದು ಅದು  ಹೂದಾನಿಯಾಗಿ ಮರಳುತ್ತಿದ್ದು ಇಲ್ಲಿನ ಕಾಳು ಮೆಣಸು ತೆಂಗಿನ ನಾರು ಜಗತ್ತಿನ ಬೇರೆ ಬೇರೆ ದೇಶಗಳಿಗೆ ತಲುಪಿದ್ದು... ಮುಂತಾದ ಚಿಕ್ಕ ಚಿಕ್ಕ ವಿಚಾರಗಳನ್ನು ಹೆಕ್ಕಿ ತೆಗೆದು ಜನರಿಗೆ ತಿಳಿಸಬೇಕಿದೆ. ಇಲ್ಲದಿದ್ದರೆ ನಮ್ಮದೇ ನಾಡಿನಲ್ಲಿ ನಮಗೆ ಸ್ಥಳವೇ ಇಲ್ಲದ ದಿನಗಳು ಬರಲಿವೆ’ ಎಂದರು.  ‘ಇಸ್ಲಾಂ ಆಡಳಿತದ ಬಳಿಕ ಹಿಂದೂಗಳ ಮೇಲೆ ಒಳ್ಳೆಯ ಪರಿಣಾಮಗಳೂ ಆಗಿವೆ. ಹಿಂದೂ ಧರ್ಮವು  ದೂರ ಇಟ್ಟಿದ್ದ ದಲಿತರು ಶೂದ್ರರು ಇಸ್ಲಾಂ ಅನ್ನು ಒಪ್ಪಿದರು.‌ ಇದನ್ನು ಮತಾಂತರ ಎನ್ನಲಾಗದು’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.