ಎಸ್‌ಎಸ್‌ಎಲ್‌ಸಿ ಫಲಿತಾಂಶ
– ಗೆಟ್ಟಿ ಚಿತ್ರ
ಮಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ–1ರ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿದೆ. ಕಳೆದ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ 91.12 ರಷ್ಟಾಗಿದೆ.
ಪರೀಕ್ಷೆಗೆ ಹಾಜರಾಗಿದ್ದ 27,795 ವಿದ್ಯಾರ್ಥಿಗಳಲ್ಲಿ 25,326 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಸಾಲಿನಲ್ಲಿ ಜಿಲ್ಲೆಯ ಒಟ್ಟು ಫಲಿತಾಂಶ ಶೇ 92.12ರಷ್ಟಾಗಿತ್ತು.
ಶೇ 94 ಬರಬಹುದೆಂಬ ನಿರೀಕ್ಷೆ ಇತ್ತು. ಒಟ್ಟಾರೆ ಫಲಿತಾಂಶ ಕಡಿಮೆಯಾಗಿರುವ ಕಾರಣ ಜಿಲ್ಲೆಯಲ್ಲಿ ನಮ್ಮ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಫಲಿತಾಂಶ ಬಂದರೂ, ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಶಿಕ್ಷಕರು, ವಿದ್ಯಾರ್ಥಿಗಳ ಶ್ರಮದಿಂದ ಇದು ಸಾಧ್ಯವಾಗಿದೆ. ಪಾಲಕರು ತುಂಬಾ ಸಹಕಾರ ನೀಡಿದ್ದಾರೆ ಎಂದು ಡಿಡಿಪಿಐ ಗೋವಿಂದ ಮಡಿವಾಳ ಪ್ರತಿಕ್ರಿಯಿಸಿದರು.
‘ಡಿಸೆಂಬರ್ ಕೊನೆಯೊಳಗೆ ಪಠ್ಯಕ್ರಮ ಪೂರ್ಣಗೊಳಿಸಿ, ಪಾಠಗಳ ಪುನರಾವರ್ತನೆ, ಪಾಸಿಂಗ್ ಪ್ಯಾಕೇಜ್ ಪರಿಣಾಮ ನೀಡಿವೆ. ಕಲಿಕೆಯಲ್ಲಿ ಹಿಂದಿರುವ ಮಕ್ಕಳ ಅನುಕೂಲಕ್ಕಾಗಿ ಶಿಕ್ಷಕರ ಜೊತೆಗೂಡಿ ‘ವಿಜಯೀಭವ’ ಪತ್ರಿಕೆ ಪ್ರಾರಂಭಿಸಲಾಗಿತ್ತು. ಇದರಲ್ಲಿ ದಿನಕ್ಕೆ ಎರಡು ವಿಷಯಗಳ ಐದು ಪ್ರಶ್ನೆ ಮತ್ತು ಉತ್ತರ ಸಿದ್ಧಪಡಿಸಿ, ಪಿಡಿಎಫ್ ಮೂಲಕ ಮಕ್ಕಳಿಗೆ ತಲುಪಿಸಲಾಗುತ್ತಿತ್ತು. ಇದರಿಂದ ಸಾಕಷ್ಟು ಮಕ್ಕಳಿಗೆ ಅನುಕೂಲವಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.