
ಉಜಿರೆ: ಬೆಳ್ತಂಗಡಿ- ಚಾರ್ಮಾಡಿ ಹೆದ್ದಾರಿ ಸಮೀಪ ಉಜಿರೆ ಗ್ರಾಮದಲ್ಲಿರುವ ಸೇಂಟ್ ಆಂಟನಿ ಚರ್ಚ್‌ನ ಕಟ್ಟಡವನ್ನು ₹1.20 ಕೋಟಿ ವೆಚ್ಚದಲ್ಲಿ ನವೀಕರಿಸಿದ್ದು, ಡಿ.22ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪಾವ್ಲ್ ಸಲ್ಡಾನ ಅವರು ನವೀಕೃತ ಕಟ್ಟಡ ಉದ್ಘಾಟಿಸುವರು. ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬಲಿಪೂಜೆ ಅರ್ಪಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಚರ್ಚ್‌ನ ಧರ್ಮಗುರು ಅಬೆಲ್ ಲೋಬೊ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಾಸಕರಾದ ಐವನ್ ಡಿಸೋಜ, ಹರೀಶ್ ಪೂಂಜ, ಕೆ.ಪ್ರತಾಪಸಿಂಹ ನಾಯಕ್, ಎಸ್.ಎಲ್.ಭೋಜೇಗೌಡ, ಬೆಳ್ತಂಗಡಿ ವಲಯ ಧರ್ಮಗುರುಗಳಾದ ವಾಲ್ಟರ್ ಡಿಮೆಲ್ಲೊ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್‌ಶಿವರಾಂ, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಎಂ., ಉಜಿರೆ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಭಾಗವಹಿಸುವರು ಎಂದರು.
1969ರವರೆಗೆ ಉಜಿರೆಯ ಕ್ರೈಸ್ತರು ಬೆಳ್ತಂಗಡಿಯ ಹೋಲಿ ರಿಡೀಮರ್ ಧರ್ಮಕೇಂದ್ರದಲ್ಲಿ ಆಧ್ಯಾತ್ಮ ಕಾರ್ಯಕ್ರಮ ನಡೆಸುತ್ತಿದ್ದರು. ಬೆಳ್ತಂಗಡಿಯಲ್ಲಿ ಅಂದಿನ ಧರ್ಮಗುರುಗಳಾಗಿದ್ದ ಇ.ಪಿ.ಡಾಯಸ್ ಅವರು ಉಜಿರೆಯಲ್ಲಿ ಚರ್ಚ್ ನಿರ್ಮಿಸಲು ನಿರ್ಧರಿಸಿದ್ದರು. ಉಜಿರೆ ಧರ್ಮಕೇಂದ್ರದ ಪ್ರಥಮ ಧರ್ಮಗುರುಗಳಾಗಿ ಅವರೇ ನಿಯುಕ್ತಿಗೊಂಡರು. ಅಂದು ಕ್ರೈಸ್ತರ ಸುಮಾರು 40 ಕುಟುಂಬಗಳನ್ನು ಹೊಂದಿದ್ದ ಈ ಧರ್ಮಕೇಂದ್ರವನ್ನು ಪದುವಾದ ಸೇಂಟ್ ಆಂಟನಿಯವರ ಹೆಸರಿಗೆ ಸಮರ್ಪಿಸಲಾಯಿತು ಎಂದರು.
1995ರಲ್ಲಿ ಧರ್ಮಗುರು ಆ್ಯಂಡ್ರೂ ಡಿಸೋಜ ಅವರ ನೇತೃತ್ವದಲ್ಲಿ ನೂತನ ಚರ್ಚ್ ನಿರ್ಮಾಣಗೊಂಡಿತು. ಚರ್ಚ್‌ನ ಶಿಲುಬೆ ಗೋಪುರವನ್ನು ನವೀಕರಿಸಲಾಗಿದೆ. ಅಲ್ಲಿ ಮೂರು ಎಲ್ಇಡಿಯ ಶಿಲುಬೆ ರಚಿಸಲಾಗಿದೆ. ಗೋಪುರ ಮಧ್ಯಭಾಗದಲ್ಲಿ ಸೇಂಟ್ ಆಂಟನಿ ಅವರ ಹತ್ತು ಅಡಿ ಎತ್ತರದ ಪ್ರತಿಮೆ ಇಡಲಾಗಿದೆ. ಚರ್ಚ್ ಬಲಬದಿಗೆ ವೆಲಂಕಣಿ ಮಾತೆಯ ಗ್ರೊಟ್ಟೊ ಹಾಗೂ ಎಡಬದಿಗೆ ಸೇಂಟ್ ಆಂಟನಿಯವರ ಗ್ರೊಟ್ಟೊ ನಿರ್ಮಿಸಲಾಗಿದೆ.
ಚರ್ಚ್ ಸ್ಥಾಪಕ ಧರ್ಮಗುರು ಫಾ.ಇ.ಪಿ.ಡಾಯಸ್ ಅವರ ಪ್ರತಿಮೆಯನ್ನೂ ನಿರ್ಮಿಸಲಾಗಿದೆ. ರಸ್ತೆ ಬದಿಯಲ್ಲಿ ಆಕರ್ಷಕ ವಿನ್ಯಾಸದ ಪ್ರವೇಶದ್ವಾರ ನಿರ್ಮಿಸಲಾಗಿದೆ. ಸುತ್ತಲೂ ಇಂಟರ್‌ಲಾಕ್ ಅಳವಡಿಸಲಾಗಿದೆ ಎಂದರು.
ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ವಿಜಯ್ ಲೋಬೊ, ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫರ್ನಾಂಡಿಸ್, ಕಾರ್ಯದರ್ಶಿ ಲಿಗೋರಿವಾಸ್, ವಲೇರಿಯನ್ ಪಿಂಟೊ, ಪ್ರವೀಣ್ ವಿಜಯ್ ಡಿಸೋಜ, ಅರುಣ್‌ಸಂದೇಶ್ ಡಿಸೋಜ , ಜಾನೆಟ್ ರಾಡ್ರಿಗಸ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
23ರಂದು ಜನಸ್ಪಂದನ ಸಭೆ
ಉಜಿರೆ: ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ.23ರಂದು ಜನಸ್ಪಂದನ ಸಭೆ ಆಯೋಜಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9.30ಕ್ಕೆ ಕುವೆಟ್ಟು ಗ್ರಾಮ ಪಂಚಾಯಿತಿ ಸಭಾಭವನ, 11ಕ್ಕೆ ಪಡಂಗಡಿ ಗ್ರಾಮ ಪಂಚಾಯಿತಿ ಸಭಾಭವನ, 2 ಗಂಟೆಗೆ ಅಳದಂಗಡಿ ಗ್ರಾಮ ಪಂಚಾಯಿತಿ ಸಭಾಭವನ, ಸಂಜೆ 4ಕ್ಕೆ ಮೇಲಂತಬೆಟ್ಟು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಭೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.