ADVERTISEMENT

ಕಾರ್ನಾಡಿನಲ್ಲಿ ಟಿಸಿಎಸ್‌ ಘಟಕ ಶೀಘ್ರ

ಕರಾವಳಿಯಲ್ಲಿ ನಾಲ್ಕು ಕೈಗಾರಿಕಾ ಘಟಕಗಳಿಗೆ ಸರ್ಕಾರದ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 15:38 IST
Last Updated 6 ಆಗಸ್ಟ್ 2020, 15:38 IST
ವೇದವ್ಯಾಸ ಕಾಮತ್
ವೇದವ್ಯಾಸ ಕಾಮತ್   

ಮಂಗಳೂರು: ಕೋವಿಡ್‌–19 ನಿಂದ ಆರ್ಥಿಕತೆ ಕುಸಿಯುತ್ತಿದ್ದು, ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಸುಮಾರು ₹556 ಕೋಟಿ ಮೊತ್ತದ ನಾಲ್ಕು ಕೈಗಾರಿಕಾ ಘಟಕಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ 4,200 ಉದ್ಯೋಗ ಸೃಷ್ಟಿಯ ಅವಕಾಶ ಸೃಷ್ಟಿಯಾಗಲಿದೆ.

ದೇಶದ ಅತಿ ದೊಡ್ಡ ಸಾಫ್ಟ್‌ವೇರ್‌ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ದಕ್ಷಿಣ ಕನ್ನಡದ ಮೂಲ್ಕಿ ಬಳಿಯ ಕಾರ್ನಾಡ್‌ನಲ್ಲಿ ದೊಡ್ಡ ಕ್ಯಾಂಪಸ್ ತೆರೆಯಲಿದೆ. 38 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ಯೋಜನೆಗೆ ಟಿಸಿಎಸ್‌ ₹500 ಕೋಟಿ ಬಂಡವಾಳ ಹೂಡಲಿದೆ.

‘ಉಡುಪಿಯಲ್ಲಿ ಕಾರ್ಕಳ ತಾಲ್ಲೂಕಿನ ಮುಡಾರುವಿನಲ್ಲಿ ₹27 ಕೋಟಿ ವೆಚ್ಚದಲ್ಲಿ ಫುಡ್‌ಪಾರ್ಕ್‌ ತಲೆ ಎತ್ತಲಿದೆ. ಈಗಾಗಲೇ ಖರೀದಿಸಿರುವ ಸುಮಾರು 18 ಎಕರೆ ಜಾಗದಲ್ಲಿ ಫುಡ್‌ಪಾರ್ಕ್‌ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಉಡುಪಿ ಫುಡ್‌ಪಾರ್ಕ್‌ನ ಪಾಲುದಾರ ಜಾನ್‌ ರಿಚರ್ಡ್‌ ದಸಿಲ್‌ ತಿಳಿಸಿದ್ದಾರೆ.

ADVERTISEMENT

‘ಈ ಪಾರ್ಕ್‌ನಲ್ಲಿ ಆಹಾರಕ್ಕೆ ಸಂಬಂಧಿಸಿದ ಉದ್ಯಮಿಗಳಿಗೆ ಬಾಡಿಗೆಯ ಆಧಾರದಲ್ಲಿ ಜಾಗ ನೀಡಲಾಗುವುದು. ಏಳು ತಿಂಗಳಲ್ಲಿ ಈ ಪಾರ್ಕ್‌ ಆರಂಭವಾಗುವ ಸಾಧ್ಯತೆ ಇದೆ. ಇಲ್ಲಿ ನಮ್ಮದೇ ಆದ ಗೇರು ಸಂಸ್ಕರಣೆ ಹಾಗೂ ಅದಕ್ಕೆ ಸಂಬಂಧಿಸಿದ 3 ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದು ದಸಿಲ್‌ ಹೇಳಿದ್ದಾರೆ.

ಫಿನ್‌ಪವರ್‌ ಏರ್‌ಕೋನ್‌ ಸಿಸ್ಟಮ್ಸ್‌ ಸಂಸ್ಥೆಯು ಏರ್‌ ಕಂಡಿಷನ್‌ ಯಂತ್ರಗಳ ಘಟಕವನ್ನು ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಿದೆ. ಸುಮಾರು ₹17 ಕೋಟಿ ಹೂಡಿಕೆಯ ಈ ಘಟಕದಲ್ಲಿ 120 ಜನರಿಗೆ ಉದ್ಯೋಗ ದೊರೆಯಲಿದೆ. ಸದ್ಯಕ್ಕೆ ಈ ಕಂಪನಿಯು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ಘಟಕ ಹೊಂದಿದ್ದು, ಗಂಜಿಮಠದಲ್ಲಿ ಇದರ ವಿಸ್ತರಣೆ ಮಾಡಲಾಗುತ್ತಿದೆ.

‘ಸದ್ಯಕ್ಕೆ ಸರ್ಕಾರದಿಂದ 3 ಎಕರೆ ಜಾಗವನ್ನು ನೀಡಲಾಗಿದೆ. ಘಟಕ ಆರಂಭಿಸಲು ಕನಿಷ್ಠ 5 ಎಕರೆ ಜಾಗವಾದರೂ ಬೇಕು. ಘಟಕಕ್ಕೆ ಅಗತ್ಯವಿರುವ ಜಮೀನು ದೊರೆತ ನಂತರ ಘಟಕದ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಸಂಸ್ಥೆಯ ಎಚ್‌ಆರ್‌ ಮ್ಯಾನೇಜರ್‌ ಉದಯ್‌ ಶೆಣೈ ತಿಳಿಸಿದ್ದಾರೆ.

ಇದರ ಜತೆಗೆ ರೆಡ್‌ ಸ್ಟೋನ್‌ ಟ್ರೇಡಿಂಗ್‌ ಕಾರ್ಪೊರೇಷನ್‌ ಸಾಲಿಡ್‌ ಬ್ಲಾಕ್‌ ಹಾಗೂ ಹಾಲೋ ಬ್ಲಾಕ್‌ಗಳ ಘಟಕವನ್ನು ಕೈರಂಗಳ ಗ್ರಾಮದ 9 ಎಕರೆ ಜಾಗದಲ್ಲಿ ನಿರ್ಮಿಸಲು ಮುಂದೆ ಬಂದಿದೆ. ಇದಕ್ಕಾಗಿ ₹ 17 ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, 68 ಜನರಿಗೆ ಉದ್ಯೋಗ ದೊರೆಯಲಿದೆ.

*
ತುಳುನಾಡಿನಲ್ಲಿ ಟಿಸಿಎಸ್‌ ಹೊಸ ಕಚೇರಿ ತೆರೆಯಲಿದ್ದು, ಇದರಿಂದ 4 ಸಾವಿರ ಉದ್ಯೋಗಗಳನ್ನು ಪಡೆಯಬಹುದು. ಇದು ಮಂಗಳೂರಿಗರಿಗೆ ಶುಭ ಸುದ್ದಿ.
-ವೇದವ್ಯಾಸ ಕಾಮತ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.