ಮಂಗಳೂರು: ಕನ್ನಡದಲ್ಲಿ ಪ್ರಕಟಿತವಾದ ಮುಸ್ಲಿಂ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2019ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ದಿವಂಗತ ಮುಮ್ತಾಜ್ ಬೇಗಮ್ (73) ಅವರ ‘ಸ್ವಾತಂತ್ರ್ಯದ ಕಹಳೆ’ ಕೃತಿ ಆಯ್ಕೆಯಾಗಿದೆ.
ಖತಾರ್‌ನಲ್ಲಿರುವ ಯುನೆಸ್ಕೊದ ಆರ್ಥಿಕ ಹಾಗೂ ಆಡಳಿತ ಸಹಾಯಕರಾಗಿ, ದುಬೈನ ಅಲ್ ಮೀರ್ ಸಂಸ್ಥೆ ಮತ್ತು ಫ್ಯೂಜಿ ಗಾರ್ಮೆಂಟ್ಸ್'ನ ಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಮುಮ್ತಾಜ್ ಬೇಗಮ್ ವಿದ್ಯಾರ್ಥಿ ದೆಸೆಯಲ್ಲೇ ಬರವಣಿಗೆಯ ಹವ್ಯಾಸ ಮೈಗೂಡಿಸಿಕೊಂಡವರು.
‘ಅವ್ಯಕ್ತ’ ಮತ್ತು ‘ಅಂಕುರ’ (ಕಥಾ ಸಂಕಲನ), ‘ಪರದೇಶಿ’ (ಧಾರವಾಹಿ), ‘ವರ್ತುಲ’ ಮತ್ತು ‘ಬಂದಳಿಕೆ’ (ಕಾದಂಬರಿ), ‘ಚಿಂಪಿ’ (ಮಕ್ಕಳ ಸಾಹಿತ್ಯ), ‘ಸರ್ವ ಋತುಗಳೂ ನಿನಗಾಗಿ’ (ಕವನ ಸಂಕಲನ) ‘ಟು ದಿ ಅನ್‌ನೌನ್ ಡೆಸ್ಟಿನೇಶನ್’ (ಇಂಗ್ಲಿಷ್ ಕಾದಂಬರಿ) ಇವರ ಪ್ರಕಟಿತ ಕೃತಿಗಳು. ಗುಜರಾತ್‌ನಲ್ಲಿ ವೈದ್ಯೆಯಾಗಿರುವ ಮಗಳ ಜೊತೆಗಿದ್ದ ಇವರು ತನ್ನ ‘ಸೂರ್ಯಾಸ್ತ’ ಕೃತಿಯ ಬಿಡುಗಡೆಗಾಗಿ ಊರಿಗೆ ಬಂದವರು 2021ರ ಮಾರ್ಚ್ ಕೊನೆಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ, ಏಪ್ರಿಲ್ 6ರಂದು ಕೋವಿಡ್‌ನಿಂದ ನಿಧನರಾಗಿದ್ದಾರೆ.
ಅತ್ತಿಮಬ್ಬೆ, ಚೆನ್ನಶ್ರೀ, ಕಿತ್ತೂರ ರಾಣಿ ಚೆನ್ನಮ್ಮ, ಬಸವ ಜ್ಯೋತಿ, ಹಿರಿಯ ನಾಗರಿಕರ ಸಾಹಿತ್ಯ ಸಾಧಕಿ, ಜಿಲ್ಲಾ ರಾಜ್ಯೋತ್ಸವ ಮತ್ತು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿಗಳು ದೊರೆತಿವೆ.
ಪ್ರಶಸ್ತಿಯು ₹ 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದ್ದು, ಲಾಕ್‌ಡೌನ್ ಸಂಪೂರ್ಣ ತೆರವು ಬಳಿಕ ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ 36 ಕೃತಿಗಳು ಬಂದಿದ್ದವು. ಸಾಹಿತಿಗಳಾದ ಡಾ. ಹಸೀನಾ ಖಾದ್ರಿ, ಅಬ್ದುರ‍್ರಹ್‌ಮಾನ್ ಕುತ್ತೆತ್ತೂರು ಮತ್ತು ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ ತೀರ್ಪುಗಾರರಾಗಿ ಸಹಕರಿಸಿದರು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.