ADVERTISEMENT

ದಕ್ಷಿಣ ಕನ್ನಡ | ಮಾನ್ವಿಯ ಉಳಿವಿಗಾಗಿ ಸ್ಟೆಮ್ ಸೆಲ್ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 5:59 IST
Last Updated 19 ಏಪ್ರಿಲ್ 2022, 5:59 IST
ಮಂಗಳೂರಿನ ಭಾರತ್‌ ಮಾಲ್‌ನಲ್ಲಿ ಭಾನುವಾರ ಸ್ಟೆಮ್‌ ಸೆಲ್‌ ಅಭಿಯಾನ ನಡೆಯಿತು.
ಮಂಗಳೂರಿನ ಭಾರತ್‌ ಮಾಲ್‌ನಲ್ಲಿ ಭಾನುವಾರ ಸ್ಟೆಮ್‌ ಸೆಲ್‌ ಅಭಿಯಾನ ನಡೆಯಿತು.   

ಮಂಗಳೂರು: ಅಪರೂಪದ ಅನುವಂಶೀಯ ಅಸ್ವಸ್ಥತೆಯಿಂದ ಬಳಲುತ್ತಿರುವ ಕಾರ್ಕಳದ ಆರು ವರ್ಷದ ಮಗು ಮಾನ್ವಿ ಕಾಮತ್‌ಳನ್ನು ಬದುಕಿಸಲು ಆರೋಗ್ಯವಂತ ವ್ಯಕ್ತಿಯ ದೇಹದೊಳಗಿನ ಕಾಂಡ ಕೋಶ (ಸ್ಟೆಮ್ ಸೆಲ್) ಅಗತ್ಯವಿದ್ದು, ಅದಕ್ಕಾಗಿ ನಗರದ ಎರಡು ಕಡೆ ಭಾನುವಾರ ಸ್ಟೆಮ್ ಸೆಲ್ ಅಭಿಯಾನ ನಡೆಯಿತು.

ಬೆಳಿಗ್ಗೆ ನಗರದ ಭಾರತ್ ಮಾಲ್ ಮತ್ತು ಸಂಜೆ ಕದ್ರಿ ಉದ್ಯಾನದಲ್ಲಿ ಯೂತ್ ಆಫ್ ಜಿಎಸ್‌ಬಿ ಕಾರ್ಯಕರ್ತರು, ಡಿಕೆಎಂಎಸ್ ಬಿಎಂಎಸ್‌ಟಿ ಸಹಯೋಗ ದಲ್ಲಿ ಅಭಿಯಾನ ನಡೆಸಿದರು. ನಮ್ಮ ಬಾಯೊಳಗಿನ ಸಲೈವಾ ತೆಗೆದುಕೊಂಡು ಅದನ್ನು ಜರ್ಮನಿಗೆ ಕಳುಹಿಸಿ, ಅಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದು ಮಗುವಿನ ದೇಹಕ್ಕೆ ಹೊಂದಾಣಿಕೆ ಯಾದರೆ ಮುಂದಿನ ವೈದ್ಯಕೀಯ ಪ್ರಕ್ರಿಯೆಗಳನ್ನು ಮಾಡಿ ಮಾನ್ವಿಯನ್ನು ಉಳಿಸಬಹುದು ಎಂದು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿದರು.

ಹಲವಾರು ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಸಲೈವ ಮಾದರಿ ನೀಡಿ ಸಹಕರಿಸಿದರು. ಅಭಿಯಾನದಲ್ಲಿ ಸೇವಾಂಜಲಿ ಚಾರಿಟಬಲ್‌ ಟ್ರಸ್ಟಿನ ಮಂಗಲ್ಪಾಡಿ ನರೇಶ್ ಶೆಣೈ, ಹನುಮಂತ ಕಾಮತ್, ಡಿಕೆಎಂಎಸ್ ಸಂಸ್ಥೆಯ ಅಖಿಲಾ, ಮಹಾಮಿತ್ರ, ಯೂತ್ ಆಫ್‌ ಜಿಎಸ್‌ಬಿಯ ಕಿರಣ್ ಶೆಣೈ, ನಾಗೇಂದ್ರ ಶೆಣೈ, ಸಂತೋಷ್ ಶೆಣೈ ಸೇರಿದಂತೆ ಹಲವು ಸ್ವಯಂಸೇವಕರು ಭಾಗವಹಿಸಿದ್ದರು.

ADVERTISEMENT

ನಗರದ ಸಂಚಾರ ವಿಭಾಗದ ಎಸಿಪಿ ನಾಗರಾಜ್, ಮಂಗಳೂರಿನ ವಕೀಲರ ಸಂಘದ ರಾಘವೇಂದ್ರ ಸೇರಿದಂತೆ ಹಲವಾರು ಗಣ್ಯರು ಅಭಿಯಾನದಲ್ಲಿ ಪಾಲ್ಗೊಂಡರು. ಈ ಅಭಿಯಾನ ಮುಂದಿನ ತಿಂಗಳು ನಗರದ ಹಲವಾರು ಕಡೆ ನಡೆಯಲಿದ್ದು, ನಾಗರಿಕರು ಮಗುವಿನ ಜೀವ ಉಳಿಸಲು ಸಹಕರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.