ADVERTISEMENT

ನಿರಂತರ ಕಾಡುವ ಕಾಲುವೆ ಸಮಸ್ಯೆ

ಹೂಳು ತುಂಬಿದ ತೋಡು, ನಿರುಪಯುಕ್ತ ಕೇಬಲ್‌, ನೀರಿನ ಸರಾಗ ಸಂಚಾರಕ್ಕೆ ಅಡ್ಡಿ

ಸಂಧ್ಯಾ ಹೆಗಡೆ
Published 29 ಸೆಪ್ಟೆಂಬರ್ 2022, 6:53 IST
Last Updated 29 ಸೆಪ್ಟೆಂಬರ್ 2022, 6:53 IST
ಕೊಟ್ಟಾರಚೌಕಿಯ ಕಾಲುವೆಯಲ್ಲಿ ಪೈಪ್‌, ಕೇಬಲ್‌ಗಳು, ಹೂಳು ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ
ಕೊಟ್ಟಾರಚೌಕಿಯ ಕಾಲುವೆಯಲ್ಲಿ ಪೈಪ್‌, ಕೇಬಲ್‌ಗಳು, ಹೂಳು ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ   

ಮಂಗಳೂರು: ಸಾಲು ಸಾಲು ಅಂಗಡಿ ಮುಂಗಟ್ಟುಗಳು, ಮಾಲ್‌ಗಳು, ಐಷಾರಾಮಿ ಹೋಟೆಲ್‌ಗಳು, ದೊಡ್ಡ ಅಪಾರ್ಟ್‌ಮೆಂಟ್‌ಗಳು ಇಲ್ಲಿವೆ. ಸಾಮಾನ್ಯ ದಿನಗಳಲ್ಲಿ ಅಚ್ಟುಕಟ್ಟಾದ ಪ್ರದೇಶದಂತೆ ಕಾಣುವ ಈ ಭಾಗವು, ಮಳೆಬಂದರೆ ತೇಲುವ ನಗರವಾಗಿ ಮಾರ್ಪಡುತ್ತದೆ!

ಹೌದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೊಟ್ಟಾರಚೌಕಿ ಭಾಗದಲ್ಲಿ ಬದುಕು ಕಟ್ಟಿಕೊಂಡಿರುವವರು ನಿರಂತರ ಮಳೆ ಸುರಿಯಲಾರಂಭಿಸಿದರೆ ಬೆಚ್ಚಿ ಬೀಳುತ್ತಾರೆ. ಯಾಕೆಂದರೆ, ಒಂದೆರಡು ತಾಸು ಜೋರು ಮಳೆಯಾದರೆ, ಇಡೀ ಪ್ರದೇಶ ಜಲಾವೃತಗೊಳ್ಳುತ್ತದೆ. ಈ ಬಾರಿ ಮಳೆಗಾಲದಲ್ಲಿ ಜಲದಿಗ್ಬಂಧನದಿಂದ ಯಾತನೆ ಅನುಭವಿಸಿರುವ ಹಲವರು, ಮನೆಗಳನ್ನು ಮಾರಾಟ ಮಾಡಿ, ಬೇರೆಡೆ ಸ್ಥಳಾಂತರಗೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ.

ಗೋಲ್ಡ್‌ಫಿಂಚ್ ಸಿಟಿಯ ಪಕ್ಕದಲ್ಲಿ ಬಂಗ್ರಕುಳೂರು ನದಿ ಹರಿಯುತ್ತದೆ. ಇದು ನೋಡುಗರಿಗೆ ಚರಂಡಿಯೋ, ನದಿಯೋ ಎಂಬ ಅನುಮಾನ ಹುಟ್ಟಿಸುತ್ತದೆ. ಸ್ಥಳೀಯರು ಹೇಳುವ ಪ್ರಕಾರ, ‘ಸುತ್ತಮುತ್ತಲಿನ ಸುಮಾರು 17 ಚದರ ಕಿಲೋ ಮೀಟರ್ ಜಲಾನಯನ ಪ್ರದೇಶದ ಮಳೆ ನೀರು ಹರಿದು ಹೋಗಲು ಇದೊಂದೇ ಮಾರ್ಗವಾಗಿದೆ. ಅಲ್ಲದೇ, ಒಂದೆರಡು ವರ್ಷಗಳ ಈಚೆಗೆ ನಾಲ್ಕನೇ ಮೈಲು ಸೇತುವೆಯ ಒಂದು ಭಾಗದಲ್ಲಿ ಸುಮಾರು 85 ಅಡಿ ಅಗಲವಿದ್ದರೆ, ಇನ್ನೊಂದು ಭಾಗ ಕುಗ್ಗಿದೆ, ಅಲ್ಲಿ 35 ಅಡಿಯಷ್ಟು ಮಾತ್ರ ಕಾಲುವೆ ಇದೆ. ಈ ಕಾಲುವೆಗೆ ಸಮೀಪದ ಪಂಜಿನಮೊಗರು, ಕಾವೂರು, ಬೊಂದೇಲ್, ದೇರೆಬೈಲ್ ಕೊಂಚಾಡಿ, ಯಯ್ಯಾಡಿ ಭಾಗದಿಂದ ಹರಿದು ಬರುವ ನೀರು ಕೂಡ ಸೇರಿಕೊಳ್ಳುತ್ತದೆ.’

ADVERTISEMENT

‘ಎರಡು ದಶಕಗಳಿಂದ ಈ ಭಾಗದಲ್ಲಿ ನೆಲೆಸಿದ್ದರೂ, ಮಳೆಗಾಲದಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗುವುದನ್ನು ಈಚೆಗೆ ಕಾಣುತ್ತಿದ್ದೇವೆ. ಕಾಲುವೆ, ತೋಡುಗಳನ್ನು ನಿರ್ಲಕ್ಷಿಸಿದ ಪರಿಣಾಮ ಇದಾಗಿದೆ. ದೊಡ್ಡ ಕಾಲುವೆ ಇದ್ದರೂ, ಅದರೊಳಗೆ ಸೇರಿರುವ ಕುಡಿಯುವ ನೀರಿನ ಪೈಪ್, ನಿರುಪಯುಕ್ತ ಕೇಬಲ್‌ಗಳು, ಚಾಲ್ತಿಯಲ್ಲಿರುವ ಕೇಬಲ್‌ಗಳು, ಪ್ಲಾಸ್ಟಿಕ್ ತ್ಯಾಜ್ಯ, ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯುಂಟು ಮಾಡುತ್ತದೆ. ಅನೇಕ ವರ್ಷಗಳಿಂದ ಕಾಲುವೆಗಳ ಹೂಳೆತ್ತಿಲ್ಲ. ಕಲ್ವರ್ಟ್ ಇರುವಲ್ಲಿ ಹೂಳು ತೆಗೆಯುವುದು ಕೂಡ ಸಾಹಸದ ಕೆಲಸ’ ಎನ್ನುತ್ತಾರೆ ಸ್ಥಳೀಯ ಹೋರಾಟಗಾರ ಸುರೇಶ್ ಉಡುಪ.

‘ಕಾಲುವೆಯ ನೀರು ಸಮೀಪದ ಪಡ್ಡೋಡಿ ಕಿಂಡಿ ಅಣೆಕಟ್ಟೆ ಮೂಲಕ ಹರಿದು ಹೋಗುತ್ತದೆ. ಈ ಕಿಂಡಿ ಅಣೆಕಟ್ಟಿಗೆ 21 ವೆಂಟ್‌ ಇದ್ದು, ಇದರ ಕೆಳಗೆ ಮತ್ತೆ ಐದು ವೆಂಟ್‌ಗಳು ಇವೆ. ಎಸ್‌ಟಿಪಿ ಪ್ಲಾಂಟ್‌ಗಳ ಸೀವೇಜ್ ನೀರು ಬಂದು, ಅಲ್ಲಿನ ಹೊಸಲು ಇಲ್ಲಿ ಹೂಳಾಗಿ ಪರಿವರ್ತನೆಗೊಂಡು, ಅಣೆಕಟ್ಟೆ ನಿರುಪಯುಕ್ತವಾಗುತ್ತಿದೆ. ಕೊಟ್ಟಾರಚೌಕಿಯ ಮಾಲೆಮಾರ್ ಭಾಗದಲ್ಲಿ ಮಳೆ ಬಂದಾಗ ನೆರೆ ಬರಲು ಇದು ಕೂಡ ಕಾರಣ ಎಂಬುದು ವೈಜ್ಞಾನಿಕ ಅಧ್ಯಯನ ಮಾಡಿದವರ ಅಭಿಪ್ರಾಯ’ ಎನ್ನುತ್ತಾರೆ ಅವರು.

‘ರಾಜಕಾಲುವೆ ಸಮಗ್ರ ಸರ್ವೆ’

ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಈ ಸಂಬಂಧ ಚರ್ಚಿಸಲಾಗಿದೆ. ಕೋಡಿಕಲ್‌ನಿಂದ ಮಾಲೆಮಾರ್‌ವರೆಗೆ ಇಡೀ ರಾಜಕಾಲುವೆ ಸರ್ವೆ ನಡೆಸಿ, ಸಾಧ್ಯತೆ ಇದ್ದಲ್ಲಿ ವಿಸ್ತರಿಸಲು ನಿರ್ಧರಿಸಲಾಗಿದೆ. ಕೆಲವು ಕಡೆಗಳಲ್ಲಿ ಬಫರ್ ಝೋನ್ ಇಲ್ಲದಿರುವುದು ಕೂಡ ಗಮನಕ್ಕೆ ಬಂದಿದೆ. ಅತಿಕ್ರಮಣ ಆಗಿದ್ದರೆ ತೆರವುಗೊಳಿಸುವ, ಅಗತ್ಯವಿದ್ದರೆ ಭೂಮಿ ಪಡೆಯುವ ಕುರಿತು ಕೂಡ ಯೋಚಿಸಲಾಗಿದೆ. ಕಾಲುವೆಯಲ್ಲಿರುವ ಕುಡಿಯುವ ನೀರಿನ ಪೈಪ್‌ಲೈನ್ ಸದ್ಯದಲ್ಲಿ ಸ್ಥಳಾಂತರಗೊಳ್ಳಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.