ADVERTISEMENT

ಬೀದಿನಾಯಿಗಳ ಹಕ್ಕುಗಳನ್ನು ಗೌರವಿಸಿ: ಪಾಲಿಕೆ ಎದುರು ಪ್ರಾಣಿಪ್ರಿಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:23 IST
Last Updated 15 ಫೆಬ್ರುವರಿ 2026, 2:23 IST
ಬೀದಿನಾಯಿಗಳ ಹಕ್ಕುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಪ್ರಾಣಿಪ್ರಿಯರು ಮಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ
ಬೀದಿನಾಯಿಗಳ ಹಕ್ಕುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ಪ್ರಾಣಿಪ್ರಿಯರು ಮಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಮಂಗಳೂರು: ಬೀದಿನಾಯಿಗಳಿಗೂ ಬದುಕುವ ಹಕ್ಕು ಇದೆ. ಮೂಕಪ್ರಾಣಿಗಳ ಹಕ್ಕುಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿ ನಗರದ ಪ್ರಾಣಿಪ್ರಿಯರು ನಗರದ ಲಾಲ್‌ಭಾಗ್‌ನ ಪಾಲಿಕೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಬೀದಿನಾಯಿಗಳ ನಿರ್ವಹಣೆ ಸಂಬಂಧ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ ಅಭಿಪ್ರಾಯವನ್ನೇ  ಮುಂದಿಟ್ಟುಕೊಂಡು ಕೆಲವರು ಅವುಗಳಿಗೆ ಆಹಾರ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೀದಿನಾಯಿಗಳಿಗೆ ಊಟ ಹಾಕುವವರಿಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಬೀದಿನಾಯಿಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಕೆಲವು  ಮಾರ್ಗಸೂಚಿಗಳನ್ನಷ್ಟೇ ಹೊರಡಿಸಿದೆ. ಈ ಪ್ರಕರಣದ ಅಂತಿಮ ಆದೇಶ ಇನ್ನಷ್ಟೇ ಬರಬೇಕಿದೆ. ಮಾರ್ಗಸೂಚಿ ಪ್ರಕಾರ ಬೀದಿನಾಯಿಗಳ ಪುನರ್ವಸತಿಗೆ ಕ್ರಮವಹಿಸುವವರೆಗೆ ಅವುಗಳಿಗೆ ಹಿಂದಿನಂತೆಯೇ ಊಟ ಹಾಕಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

ADVERTISEMENT

ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಾಕುನಾಯಿಗಳನ್ನು ಬೀದಿಯಲ್ಲಿ ಬಿಡುವವರ ವಿರುದ್ಧ ಕ್ರಮವಹಿಸಬೇಕು. ಬೀದಿನಾಯಿಗಳ ಆಹಾರ ತಾಣಗಳನ್ನು ಗೊತ್ತುಪಡಿಸಬೇಕು. ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಉತ್ತೇಜಿಸಬೇಕು ಎಂದೂ ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಾಣಿಪ್ರಿಯರಾದ ಹರೀಶ್ ರಾಜಕುಮಾರ್, ಡಾ.ಶ್ರುತಿ ರಾವ್, ಬಿಂದಿಯಾ, ಸುಮಾ ನಾಯಕ್‌ ಮಮತಾ ರಾವ್‌, ಶಾಲೆಟ್ ಮೊದಲಾದವರು ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.