
ಮಂಗಳೂರು: 'ಬೀದಿ ನಾಯಿಗಳಿಗೆ ಆಹಾರ ನೀಡಲು ಪಾಲಿಕೆ ನಿರ್ದಿಷ್ಟ ಜಾಗಗಳನ್ನು ಗೊತ್ತುಪಡಿಸಲಾಗುತ್ತದೆ. ಬೀದಿ ನಾಯಿಗಳಿಗೆ ಆ ಜಾಗದಲ್ಲೇ ಶ್ವಾನ ಪ್ರಿಯರು ಆಹಾರವನ್ನು ಒದಗಿಸಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಬೇಕು’ ಎಂದು ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿರ್ವಹಣೆ ಕುರಿತು ಚರ್ಚಿಸಲು ಶ್ವಾನಪ್ರಿಯರ ಜೊತೆ ಇಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಬೀದಿ ನಾಯಿಗಳಿಗೆ ಆಹಾರ ನೀಡುವ ಜಾಗ ಗುರುತಿಸುವಾಗ ಶ್ವಾನಪ್ರಿಯರನ್ನು ವಿಶ್ವಾಸಕ್ಕೆ ಪಡೆಯುತ್ತೇವೆ. ಆಯಾ ಪ್ರದೇಶದಲ್ಲಿ ಇರುವ ಬೀದಿನಾಯಿಗಳ ಸಂಖ್ಯೆಯನ್ನು ಆಧರಿಸಿ ಈ ಬಗ್ಗೆ ತೀರ್ಮಾನಿಸಲಿದ್ದೇವೆ. ಈ ವಿಚಾರದಲ್ಲಿ ಶ್ವಾನ ಪ್ರಿಯರ ಸಲಹೆಗಳನ್ನು ಪರಿಗಣಿಸಿಯೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.
ದೂರು ನಿರ್ವಹಣೆಗೆ ಸಮಿತಿ: ಬೀದಿನಾಯಿಗಳಿಗೆ ಆಹಾರ ಹಾಕುವ ಕುರಿತ ಅಹವಾಲು ಆಲಿಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗುತ್ತದೆ. ನಾಯಿಗಳಿಗೆ ಆಹಾರ ಹಾಕುವವರಿಗೆ ಯಾರಾದರೂ ಅಡ್ಡಿಪಡಿಸಿದರೆ ಈ ಸಮಿತಿಗೆ ದೂರು ನೀಡಬಹುದು ಎಂದರು.
ಅನಿಮಲ್ ಕೇರ್ ಟ್ರಸ್ಟ್‌ನ ಮಮತಾ ರಾವ್, ‘ಹೊಟ್ಟೆ ತುಂಬಿದ ಪ್ರಾಣಿಗಳಲ್ಲಿ ಆಕ್ರಮಣಶೀಲತೆ ಕಡಿಮೆಬೀದಿ ನಾಯಿಗಳಿಗೆ ನಿಯಮಿತವಾಗಿ ಆಹಾರ ಮತ್ತು ನೀರು ನೀಡಿದರೆ ಅವು ಆರೋಗ್ಯಯುತವಾಗಿರುತ್ತವೆ. ಆಹಾರಕ್ಕಾಗಿ ಅವುಗಳು ಅಲೆದಾಡುವುದು ತಪ್ಪಿಸಬಹುದು’ ಎಂದು ತಿಳಿಸಿದರು.
‘ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಬೀದಿನಾಯಿಗಳನ್ನು ಹಿಡಿಯಲು ಆಹಾರ ನೀಡುವವರು ನೆರವಿಗೆ ಬರುತ್ತಾರೆ. ಶಸ್ತ್ರಚಿಕಿತ್ಸೆ ಆಗದ ಬೀದಿನಾಯಿಗಳ ಬಗ್ಗೆಯೂ ಅವರಿಗೆ ಅರಿವಿರುತ್ತದೆ. ದಾರಿಯಲ್ಲಿ ಬಿಟ್ಟುಹೋದ ಪ್ರಾಣಿಗಳನ್ನು ರಕ್ಷಿಸಿ, ಪೋಷಿಸಿ, ದತ್ತು ಪಡೆಯುವಲ್ಲಿಯೂ ಅವರ ಪಾತ್ರ ಮಹತ್ವದ್ದು’ ಎಂದರು.
ಅನಿಮಲ್ ಕೇರ್ ಟ್ರಸ್ಟ್‌ನ ಸುಮಾ ಆರ್. ನಾಯಕ್, ‘ಬೀದಿ ನಾಯಿಗಳಿಗೆ ಆಹಾರ ನೀಡುವ ಬಗ್ಗೆ ಇರುವ ಗೊಂದಲ ನಿವಾರಣೆ ಆಗಬೇಕಿದೆ. ಈ ಕುರಿತು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಆಗ್ರಹಿಸುವ ಅಭಿಯಾನವನ್ನು ಇದೇ 29ರಂದು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
ಬೀದಿ ನಾಯಿ ಮೇಲೆ ಸಾಕು ನಾಯಿ ದಾಳಿ ತಡೆಗೆ ಕ್ರಮವಹಿಸಿ: ಆಗ್ರಹ | ಪಾಲಿಕೆಯು ಸಾಕು ನಾಯಿಗಳ ಗಣತಿ ನಡೆಸಿ, ಅವುಗಳ ನೋಂದಣಿ ಕಡ್ಡಾಯಗೊಳಿಸಲಿ | ‘ಸಾಕು ನಾಯಿಗಳಿಗೂ ಸಂತಾನಶಕ್ತಿ ಹರಣ ಚಿಕಿತ್ಸೆ ಕಡ್ಡಾಯವಾಗಲಿ’
‘ಪ್ರಾಣಿ ಚಿಕಿತ್ಸಾಲಯಕ್ಕೆ ಬೊಂಡಂತಿಲದಲ್ಲಿ 12.5 ಎಕರೆ’
ಪ್ರಾಣಿಗಳ ಚಿಕಿತ್ಸಾಲಯ ಆರಂಭಿಸಲು ಬೊಂಡಂತಿಲ ಗ್ರಾಮದಲ್ಲಿ 12.5 ಎಕರೆ ಜಾಗವನ್ನು ಜಿಲ್ಲಾಧಿಕಾರಿ ಕಾಯ್ದಿರಿಸಿದ್ದಾರೆ. ಇಲ್ಲಿ ಚಿಕಿತ್ಸಾಲಯ ಹಾಗೂ ಪ್ರಾಣಿಗಳ ಸ್ಮಶಾನ ಆರಂಭಿಸಲು ಪ್ರಸ್ತಾವ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎಂದು ರವಿಚಂದ್ರ ನಾಯಕ್ ತಿಳಿಸಿದರು.
‘ಮಕ್ಕಳು ವೃದ್ಧರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ’
'ಮಕ್ಕಳು ಆಡುವ ಪ್ರದೇಶಗಳು ಶಾಲೆಗಳು ಮೈದಾನಗಳ ಪ್ರವೇಶ ಮತ್ತು ನಿರ್ಗಮನ ಸ್ಥಳಗಳು ಮೆಟ್ಟಿಲುಗಳ ಬಳಿ ಮತ್ತು ಹಿರಿಯ ನಾಗರಿಕರು ಓಡಾಡುವ ಜಾಗಗಳಲ್ಲಿ ಬೀದಿ ನಾಯಿಗಳಗೆ ಆಹಾರ ನೀಡುವುದು ಸೂಕ್ತವಲ್ಲ. ಅಂತಹ ಸ್ಥಳಗಳಲ್ಲಿ ಮಕ್ಕಳು ಮತ್ತು ಹಿರಿಯ ನಾಗರಿಕರುಭೇಟಿ ನೀಡದ ಸಮಯದಲ್ಲಿ ಆಹಾರ ನೀಡಬಹುದು. ಆಹಾರ ನೀಡುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮಾನವ ಪ್ರಾಣಿ ಸಂಘರ್ಷ ನಿಯಂತ್ರಣಕ್ಕೆ ಇದು ಬಲುಮುಖ್ಯ’ ಎಂದು ಸುಮಾ ಆರ್.ನಾಯಕ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.