ಮಂಗಳೂರು: ಫರಂಗಿಪೇಟೆಯಿಂದ ಪಿ.ಯು ವಿದ್ಯಾರ್ಥಿ ನಾಪತ್ತೆ ಪ್ರಕರಣವನ್ನು ಮುಂದಿಟ್ಟುಕೊಂಡು ಶಾಸಕ ಡಾ.ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜಾ, ಬಜರಂಗದಳ ಕಾರ್ಯಕರ್ತ ಭರತ್ ಕುಂಬ್ಡೇಲು ಕೋಮುದ್ವೇಷ ಹರಡಲು ಯತ್ನಿಸಿದ್ದಾರೆ ಎಂದು ಡಿವೈಎಫ್‌ಐ, ಎಸ್‌ಎಫ್‌ಐ ಹಾಗೂ ಜನವಾದಿ ಮಹಿಳಾ ಸಂಘಟನೆಗಳು ಆರೋಪಿಸಿವೆ. ಈ ಮೂವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಕೊಳ್ಳಬೇಕು ಎಂದು ಒತ್ತಾಯಿಸಿ ಈ ಸಂಘಟನೆಗಳ ಕಾರ್ಯಕರ್ತರು ಇಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
‘ಕೋಮು ಸೂಕ್ಷ್ಮ ಪ್ರದೇಶದಲ್ಲಿ ದ್ವೇಷ ಭಾಷಣ ಮಾಡಿರುವ ಶಾಸಕ ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಲ್ಲವೇಕೆ ಎಂದು ಗೃಹಸಚಿವ ಜಿ.ಪರಮೇಶ್ವರ ಉತ್ತರಿಸಬೇಕು. ಕೋಮು ದ್ವೇಷ ಹುಟ್ಟಿಸುವವರ ವಿರುದ್ಧ ಪ್ರಕರಣ ದಾಖಲಿಸುವ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಕ್ಷವು ನೀಡಿದ್ದ ಭರವಸೆ ಏನಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್, ‘ವಿದ್ಯಾರ್ಥಿ ನಾಪತ್ತೆಯಾದಾಗ ಜನಪ್ರತಿನಿಧಿಗಳು ಆತನ ಕುಟುಂಬಕ್ಕೆ ಧೈರ್ಯ ತುಂಬಬೇಕಾಗಿತ್ತು. ಫರಂಗಿಪೇಟೆ ಹಾಗೂ ಅಮ್ಮೆಮಾರ್ ಪ್ರದೇಶದ ಮುಸ್ಲಿಂ ಸಮುದಾಯವ ವಿರುದ್ಧ ಸಮಾಜವನ್ನು ಎತ್ತಿಕಟ್ಟಲು ಯತ್ನಿಸಿರುವ ಭರತ್ ಶೆಟ್ಟಿ ಹಾಗೂ ಹರೀಶ್ ಪೂಂಜ ಶಾಸಕರಾಗಲು ನಾಲಾಯಕ್ ಎಂದು ಸಾಬೀತು ಮಾಡಿದ್ದಾರೆ. ನೀವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಅತ್ಯಾಚಾರ ನಡೆದರೆ, ಇಡೀ ಕ್ಷೇತ್ರವನ್ನೇ ಅತ್ಯಾಚಾರಿಗಳ ಕ್ಷೇತ್ರ ಎಂದು ಕರೆಯಬಹುದೇ, ಒಂದಿಬ್ಬರು ಗಾಂಜಾ ವ್ಯಸನಿಗಳಿದ್ದಾರೆ ಎಂಬ ಕಾರಣಕ್ಕೆ ಇಡೀ ಕ್ಷೇತ್ರವನ್ನು ಗಾಂಜಾ ವ್ಯಸನಿಗಳ ಕ್ಷೇತ್ರ ಎಂದು ಕರೆಯಬಹುದೇ’ ಎಂದು ಪ್ರಶ್ನಿಸಿದರು.
‘ಶಾಸಕರ ದ್ವೇಷದ ಮಾತು ಜಿಲ್ಲೆಯನ್ನು ಅಧಃಪತನದತ್ತ ಕೊಂಡೊಯ್ಯಲಿದೆ. ಮುಸ್ಲಿಂ ಸಮುದಾಯವನ್ನು ಶಾಸಕರ ಮಾತುಗಳು ಘಾಸಿಗೊಳಿಸಿವೆ. ಆದರೂ ಆ ಸಮುದಾಯ ತಾಳ್ಮೆಯಿಂದ ವರ್ತಿಸಿದೆ. ಆಧಾರರಹಿತ ಆರೋಪ ಮಾಡಿದ ಬಿಜೆಪಿ ಶಾಸಕರು ಕ್ಷಮೆ ಯಾಚಿಸಬೇಕು’ ಎಂದರು.
‘ಕುತ್ತಾರಿನಲ್ಲಿ ಕೊರಗಜ್ಜನ ಆದಿಸ್ಥಳದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧವೂ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಡಿವೈಎಫ್‌ಐ ಜಿಲ್ಲಾಘಟಕದ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, ‘ನಾಪತ್ತೆಯಾಗಿದ್ದ ಫರಂಗಿಪೇಟೆ ವಿದ್ಯಾರ್ಥಿ ಪತ್ತೆಯಾದ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ತುಟಿ ಬಿಚ್ಚುತ್ತಿಲ್ಲ. ಜನರ ಮುಂದೆ ಅವರು ಬೆತ್ತಲಾಗಿದ್ದಾರೆ. ಅವರ ಬಂಡವಾಳ ಬಯಲಾಗಿದೆ’ ಎಂದರು.
‘ರಾಜ್ಯದಲ್ಲಿ ಜಾತ್ಯತೀತ ಸರ್ಕಾರವಿದೆ ಎಂದು ಜನ ಭರವಸೆ ಇಟ್ಟುಕೊಂಡಿದ್ದಾರೆ. ಅಭಿವೃದ್ಧಿ ಸಲುವಾಗಿ ಪ್ರತಿಭಟನೆ ನಡೆಸುವ ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ಸರ್ಕಾರಕ್ಕೆ ಧರ್ಮಗಳ ನಡುವೆ ಜಗಳ ಸೃಷ್ಟಿಸುವವರ ಮೇಲೆ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.
ಜೆಎಂಎಸ್ ಜಿಲ್ಲಾ ಘಟಕದ ಅಧ್ಯಕ್ಷರಾದ ಜಯಂತಿ ಬಿ.ಶೆಟ್ಟಿ, ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡ ರಿಜ್ವಾನ್ ಹರೇಕಳ, ರಜಾಕ್ ಮುಡಿಪು, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ಜಗದೀಶ್ ಬಜಾಲ್, ಜೆಎಂಎಸ್‌ನ ಭಾರತೀ ಬೋಳಾರ, ಪ್ರಮೀಳಾ, ಅಸುಂತ ಡಿಸೋಜ, ಯೋಗಿತಾ, ಅಮ್ಮೆಮಾರ್ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹನೀಫ್, ಬಶೀರ್ ತಂಡೇಲ್, ವಿ.ಎಚ್ ಕರೀಂ, ಹೈದರ್ ಅಮ್ಮೆಮಾರ್,ಅಶ್ರಫ್ ಅಸ್ರ, ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಮುಜಾಫರ್, ನೌಷದ್ ಕಣ್ಣೂರು, ಪಾಲಿಕೆ ಮಾಜಿ ಸದಸ್ಯ ದಯಾನಂದ ಶೆಟ್ಟಿ, ಶೇಖರ್ ಕುಂದರ್, ಆಸೀಫ್ ಬಂದರು, ನೌಶದ್ ಬೆಂಗರೆ, ಯೋಗೀಶ್ ಜಪ್ಪಿನಮೊಗರು, ಅನ್ಸಾರ್ ಫೈಸಲ್ ನಗರ, ರಫೀಕ್ ಪಿ.ಜಿ, ಮುಹಾಝ್ ಭಾಗವಹಿಸಿದ್ದರು. ಡಿವೈಎಫ್‌ಐ ಜಿಲ್ಲಾ ಖಜಾಂಜಿ ಮನೋಜ್ ವಾಮಂಜೂರು ಸ್ವಾಗತಿಸಿದರು. ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷರಾದ ವಿನುಷ ರಮಣ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.