ADVERTISEMENT

ಸುಬ್ರಹ್ಮಣ್ಯ: ಹೂತಿದ್ದ ವಾಹನ ತಳ್ಳಿದ್ದ, ನೆಟ್‌ವರ್ಕ್‌ಗಾಗಿ ಗುಡ್ಡ ಹತ್ತಿದ್ಧ

ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಪಡೆದ ಸುಬ್ರಹ್ಮಣ್ಯ ಸಮೀಪದ ಬಳ್ಪ ಗ್ರಾಮದ ಅನುಷ್

ಲೋಕೇಶ್ ಸುಬ್ರಹ್ಮಣ್ಯ
Published 12 ಆಗಸ್ಟ್ 2020, 16:38 IST
Last Updated 12 ಆಗಸ್ಟ್ 2020, 16:38 IST
ನೆಟ್‌ವರ್ಕ್ ಹುಡುಕಾಟ
ನೆಟ್‌ವರ್ಕ್ ಹುಡುಕಾಟ   

ಸುಬ್ರಹ್ಮಣ್ಯ: ‘ಕೆಲವೊಮ್ಮೆ ಕೆಸರಿನಲ್ಲೇ ಹೆಜ್ಜೆ ಹಾಕಿ, ಗೆಳೆಯರೊಂದಿಗೆ ವಾಹನ ತಳ್ಳಿ, ಶಾಲೆ ಸೇರುತ್ತಿದ್ದೆ. ನೆಟ್‌ವರ್ಕ್‌ಗಾಗಿ ಗುಡ್ಡ ಹತ್ತಿ ಅಲೆದಾಡುತ್ತಿದೆ...’

ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕ ಪಡೆದ ಕಡಬ ತಾಲ್ಲೂಕಿನ ಬಳ್ಪ ಗ್ರಾಮದ ಎಣ್ಣೆಮಜಲಿನ ವಿದ್ಯಾರ್ಥಿ ಅನುಷ್‌ ಎ.ಎಲ್‌., ‘ಪ್ರಜಾವಾಣಿ’ ಆತ್ಮೀಯವಾಗಿ ಮಾತನಾಡಿಸಿದಾಗ ಸಾಧನೆಯ ಹಿಂದಿದ್ದ ಹೋರಾಟದ ಹಾದಿಯನ್ನು ಬಿಚ್ಚಿಟ್ಟರು.

ಮುಜುಗರ ಪಡುತ್ತಲೇ ಮಾತನಾಡಿದ ಅವರು, ‘ನಮ್ಮನ್ನು ಕರೆದೊಯ್ಯಲು ಬಸ್ ಬರುತ್ತಿದ್ದರೂ, ಸ್ವಲ್ಪ ದೂರ ಕೆಸರು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿತ್ತು. ಅದೂ ಮಳೆಗಾಲ ಭೋರ್ಗರೆಯುವ ಮಳೆಯಲ್ಲಿ ನಮ್ಮ ಪಾಡು...’ ಎಂದು ಮುಗುಳ್ನಕ್ಕರು.

ADVERTISEMENT

ಅನುಷ್‌, ಸುಬ್ರಹ್ಮಣ್ಯದ ವಿದ್ಯಾನಗರದ ಕುಮಾರಸ್ವಾಮಿ ಇಂಗ್ಲಿಷ್‌ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿ. ಅಲ್ಲಿಂದ ಅವರ ಮನೆಗೆ 15 ಕಿ.ಮೀ. ದೂರವಿದೆ. ಅದು, (ಬಳ್ಪ ಗ್ರಾಮ) ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಸಂಸದ ನಳಿನ್‌ ಕುಮಾರ್ ಅವರ ಆದರ್ಶ ಗ್ರಾಮ.

‘ನಮ್ಮೂರಿನ ದಾರಿ ಹದಗೆಟ್ಟು ಹೋಗಿದೆ. ಮಳೆಗಾಲದಲ್ಲಿ ನೀರಿನ ಹರಿವು ಬೇರೆ. ಹಲವು ಬಾರಿ ವಾಹನಗಳು ಕೆಸರಿನಲ್ಲಿ ಹೂತಾಗ ಅನುಷ್‌ ಸೇರಿದಂತೆ ನಾವೆಲ್ಲ ತಳ್ಳಿದ್ದೇವೆ’ ಎಂದು ಅಲ್ಲಿನ ವಿದ್ಯಾರ್ಥಿಗಳು ತಿಳಿಸುತ್ತಾರೆ.

ಬಳ್ಪದ ಬೋಗಯನಕೆರೆ ಎಂಬಲ್ಲಿಂದ ಅವರ ಮನೆಗೆ 3. ಕೀ ಮೀ ಅಂತರವಿದ್ದು, ಕಚ್ಚಾ ರಸ್ತೆ ಇದೆ. ಅದು, ಕಿತ್ತು ಹೋದ ಡಾಂಬರು, ಹೊಂಡಗಳು, ಹಳ್ಳಕೊಳ್ಳಗಳ ನಡುವೆ ಹಾದುಹೋದ ರಸ್ತೆ. ಮಳೆಗಾಲದಲ್ಲಿ ಕೆಸರು ತುಂಬಿರುತ್ತದೆ. ವಾಹನ ಮಾತ್ರವಲ್ಲ, ನಡೆದಾಡುವುದೂ ಕಷ್ಟ. ಇಂತಹ ಸ್ಥಿತಿಯಲ್ಲೂ ಆತನ ಸಾಧನೆ ಮೆಚ್ಚುವಂತದ್ದು ಎಂದು ಮಾತಿಗೆ ಸಿಕ್ಕ ಊರವರು ಪ್ರತಿಕ್ರಿಯಿಸಿದರು.

‘ ಇಲ್ಲಿನ ರಸ್ತೆಗಳನ್ನು ಪೋಷಕರೇ ಸೇರಿ ದುರಸ್ತಿ ಪಡಿಸುತ್ತಾರೆ. ಪ್ರತಿ ಮಳೆಗಾಲದಲ್ಲೂ ರಸ್ತೆಗೆ ಚರಳು ಕಲ್ಲು, ಮಣ್ಣು ತುಂಬಿ ತಾತ್ಕಾಲಿಕವಾಗಿ ಸರಿ ಪಡಿಸುತ್ತಾರೆ. ಒಂದಲ್ಲ, ಎರಡಲ್ಲ. ನಮ್ಮದು ನಿತ್ಯದ ಬವಣೆ’ ಎನ್ನುತ್ತಾರೆ ಜನತೆ.

ನೆಟ್‌ವರ್ಕ್‌:ಗ್ರಾಮೀಣ ಪ್ರದೇಶವಾದ ಕಾರಣ ಖಾಸಗಿ ಮೊಬೈಲ್ ಕಂಪೆನಿಗಳು ಹೆಚ್ಚಿನ ಅಸ್ಥೆ ವಹಿಸಿಲ್ಲ. ಬಿಎಸ್ಸೆನ್ನೆಲ್‌ ನೆಟ್‌ವರ್ಕ್ ಕೂಡಾ ಅಷ್ಟಕಷ್ಟೇ. ಇದರಿಂದಾಗಿ ಅನುಷ್ ಹಾಗೂ ಇತರ ವಿದ್ಯಾರ್ಥಿಗಳು ನೆಟ್‌ವರ್ಕ್ ಹುಡುಕಿಕೊಂಡು ಗುಡ್ಡ ಹತ್ತಿ ಇಳಿಯುತ್ತಿದ್ದರು. ಕಾಡು ಮೇಡು ಸುತ್ತಿ ಓದಿಗೆ ಬೇಕಾದ ಡಾಕ್ಯುಮೆಂಟ್ ಪಡೆಯುತ್ತಿದ್ದರು.

ಕಷ್ಟಗಳನ್ನು ಹೇಳಲು ಹಿಂಜರಿಯುವ ಅನುಷ್‌, ‘ನಾನು ಅರಣ್ಯಾಧಿಕಾರಿಯಾಗಿ ಅರಣ್ಯ, ಅರಣ್ಯ ಜೀವಿ, ಅರಣ್ಯ ವಾಸಿಗಳ ಸಮಸ್ಯೆಗೆ ಸ್ಪಂದಿಸಬೇಕು’ ಎಂಬ ದಿಟ್ಟ ಕನಸನ್ನು ಮುಂದಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.