ADVERTISEMENT

ಸುಬ್ರಹ್ಮಣ್ಯ: ಬೀದಿ ಉರುಳು ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:08 IST
Last Updated 21 ನವೆಂಬರ್ 2025, 6:08 IST
ಬೀದಿ ಉರುಳು ಸೇವೆ
ಬೀದಿ ಉರುಳು ಸೇವೆ   

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸವದ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ಸ್ವಯಂಸ್ಫೂರ್ತಿಯ ವಿಶಿಷ್ಟವಾದ ಬೀದಿ ಉರುಳು ಸೇವೆಯನ್ನು ಲಕ್ಷದೀಪೋತ್ಸವದ ರಥೋತ್ಸವದ ಬಳಿಕ ಭಕ್ತರು ಆರಂಭಿಸಿದರು.

ಷಷ್ಠಿಯಂದು ಮಹಾರಥೋತ್ಸವ ಎಳೆಯುವವರೆಗೆ ಈ ಸೇವೆಯನ್ನು ಭಕ್ತರು ನೆರವೇರಿಸುತ್ತಾರೆ. ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ರಥಬೀದಿಯಲ್ಲಿ ಉರುಳಿಕೊಂಡು ದೇವಳಕ್ಕೆ ಬಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿ ಹೊರ ಹೋಗಿ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಾರೆ. ಈ ಸೇವೆಗೆ ಯಾವುದೇ ರಶೀದಿ ಇಲ್ಲ. 

ಉರುಳು ಸೇವೆ ಮಾಡುವವರು ಹಲವು ದಿನಗಳಿಂದ ವ್ರತ ಕೈಗೊಂಡಿರುತ್ತಾರೆ. ಸುಮಾರು 2 ಕಿ.ಮೀ ದೂರ ಉರುಳು ಸೇವೆ ನಡೆಸುತ್ತಾರೆ.

ADVERTISEMENT

ಪ್ರತ್ಯೇಕ ಪಥ: ದೇವಳದಿಂದ ಆಡಳಿತ ಮಂಡಳಿಯು ಬೀದಿ ಉರುಳು ಸೇವೆಗೆ ಅನುಕೂಲತೆ ಕಲ್ಪಿಸಿದೆ. ಉರುಳು ಸೇವೆ ಮಾಡುವ ಭಕ್ತರಿಗೆ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಲಾಗಿದೆ. ರಸ್ತೆಯ ಉದ್ದಕ್ಕೂ ಸೂಚನಾ ಫಲಕ ಅಳವಡಿಸಲಾಗಿದೆ. ವಿದ್ಯುತ್ ಸೌಕರ್ಯ, ಪ್ರತಿನಿತ್ಯ ರಸ್ತೆಯನ್ನು ಸ್ವಚ್ಛ ಮಾಡಲಾಗುತ್ತಿದೆ.

ಬೀದಿ ಉರುಳು ಸೇವೆ ಮಾಡುವ ಭಕ್ತರು ಸಂಜೆ 5ರಿಂದ ಬೆಳಿಗ್ಗೆ 6 ಗಂಟೆಯ ಒಳಗೆ ಸೇವೆಯನ್ನು ಆರಂಭಿಸಿ ಸಹಕರಿಸಬೇಕು. ಸಂಜೆ, ರಾತ್ರಿ ಮತ್ತು ಮುಂಜಾನೆ ವೇಳೆ ಸೇವೆಯನ್ನು ಕುಮಾರಧಾರಾದಿಂದ ಆರಂಭಿಸಬೇಕು ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.