ಸುಬ್ರಹ್ಮಣ್ಯ: ಇಲ್ಲಿನ ನಿವಾಸಿಯಾದ ಅರ್ಚಕರೊಬ್ಬರ ಮನೆಯಲ್ಲಿ ₹18 ಲಕ್ಷ ನಗದು ಹಾಗೂ ₹31.65 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಸುಬ್ರಹ್ಮಣ್ಯದ ಮಠದಲ್ಲಿ ಸರ್ಪ ಸಂಸ್ಕಾರ ಪೂಜೆ ಮಾಡುವ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದದ ಪ್ರವೀಣ್‌ಕುಮಾರ್ ಅವರ ಮನೆಯಲ್ಲಿ ಕಳವು ನಡೆದಿದ್ದು, ಆ.6ರಂದು ಪ್ರವೀಣ್ ಅವರು ಕಪಾಟಿನ ಕೀಯನ್ನು ತೆಗೆದು ನೋಡಿದ ವೇಳೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮಗನ ಪೂಜಾ ಕಾರ್ಯಕ್ರಮದ ಖರ್ಚಿಗಾಗಿ ಮನೆಯ ಕಪಾಟಿನಲ್ಲಿಟ್ಟಿದ್ದ ₹18 ಲಕ್ಷ ನಗದು ಹಾಗೂ ₹13.65 ಲಕ್ಷ ಮೌಲ್ಯದ 273 ಗ್ರಾಂ ಚಿನ್ನಾಭರಣ ಕಳವಾಗಿದೆ ಎಂದು ಪ್ರವೀಣ್‌ಕುಮಾರ್ ಅವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.
ಚಿನ್ನದ ತುಳಸಿ ಮಣಿಸರ 36 ಗ್ರಾಂ, ಹೂವಿನ ಚಿತ್ತಾರದ ವೆಂಕಟೇಶ್ವರ ಪೆಂಡೆಂಟ್ ಇದ್ದ ಚಿನ್ನದ ಸರ 36 ಗ್ರಾಂ., 2-ಚಿನ್ನದ ಬ್ರಾಸ್‌ಲೈಟ್‌ಗಳು 21 ಗ್ರಾಂ., ಲಕ್ಷ್ಮೀ ಪೆಂಡೆಂಟ್ ಇದ್ದ ಲಾಂಗ್ ಚೈನ್ 60 ಗ್ರಾಂ., ನೆಕ್ಲೇಸ್ 18 ಗ್ರಾಂ., 4-ಚಿನ್ನದ ಬಳೆ 33 ಗ್ರಾಂ., ಲಕ್ಷ್ಮಿ ಪೆಂಡೆಂಟ್ ಇದ್ದ ಚಿಕ್ಕ ಚೈನ್ 20 ಗ್ರಾಂ., ನವಗ್ರಹ ಉಂಗುರ 7 ಗ್ರಾಂ., ಪವಿತ್ರ ಉಂಗುರ 8 ಗ್ರಾಂ., ಪಚ್ಚೆ ಉಂಗುರ 6 ಗ್ರಾಂ., 3 -ಲೇಡೀಸ್ ಉಂಗುರ 12 ಗ್ರಾಂ., ಚಿಕ್ಕ ಚೈನ್ 16 ಗ್ರಾಂ. ಸೇರಿದಂತೆ ಒಟ್ಟು 273 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಚಿನ್ನಾಭರಣದ ಒಟ್ಟು ಮೌಲ್ಯ ₹13,65,000 ಎಂದು ಅಂದಾಜಿಸಲಾಗಿದೆ. ಕಳ್ಳತನವಾದ ನಗದು ಹಾಗೂ ಚಿನ್ನಾಭರಣದ ಒಟ್ಟು ಮೌಲ್ಯ ₹31,65,000 ಎಂದು ಅಂದಾಜಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್, ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.