ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ಶಾಸಕರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರನ್ನು ಭೇಟಿ ಮಾಡಿ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಗ್ಗೆ ಚರ್ಚಿಸಿದರು: ಪ್ರಜಾವಾಣಿ ಚಿತ್ರ
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೈವಾಡ ಇದೆ. ಹಾಗಾಗಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿಯ ಶಾಸಕರು ಹಾಗೂ ಸಂಸದರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರ ಜೊತೆ ಮಾತನಾಡಿದ ಶಾಸಕ ವಿ.ಸುನಿಲ್ ಕುಮಾರ್, ‘ಪೊಲೀಸ್ ಕಮಿಷನರ್ ಅನ್ನು ಭೇಟಿಯಾಗಿ ಈ ಕೊಲೆಯ ಕುರಿತ ಅನುಮಾನಗಳನ್ನು ಹೇಳಿಕೊಂಡಿದ್ದೇವೆ. ಈ ಹತ್ಯೆಯಲ್ಲಿ ಪಿಎಫ್‌ಐ ಕಾರ್ಯಕರ್ತರು ಭಾಗಿಯಾಗಿದ್ದು, ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಿಂದ ಹಣಕಾಸು ಪೂರೈಕೆಯಾಗಿದೆ. ಹಾಗಾಗಿ ಯಾವುದೇ ಒತ್ತಡಕ್ಕೆ ಒಳಗಾಗದೇ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲು ಶಿಫಾರಸು ಮಾಡಬೇಕು ಎಂದು ಕೋರಿದ್ದೇವೆ’ ಎಂದರು.
‘ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಈ ಕೊಲೆ ಪೂರ್ವನಿರ್ಧಾರಿತ ಕೃತ್ಯ. 35ರಿಂದ 40 ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಕಾನ್‌ಸ್ಟೆಬಲ್ ಒಬ್ಬರು ಹತ್ಯೆ ಹಿಂದೆ ಇದ್ದಾರೆ ಎಂಬ ಆರೋಪದ ಬಗ್ಗೆಯೂ ಕಮಿಷನರ್ ಗಮನ ಸೆಳೆದಿದ್ದೇವೆ. ಕೃತ್ಯದಲ್ಲಿ ನೇರ ಕೈವಾಡವಿರುವ ಆರೋಪಿಗಳನ್ನು, ಅವರಿಗೆ ಮನೆಯಲ್ಲಿ ಆಶ್ರಯ ನೀಡಿದವರನ್ನು, ಸುಹಾಸ್ ಶೆಟ್ಟಿ ಚಲನವಲನ ಗಮನಿಸಿ ಆರೋಪಿಗಳಿಗೆ ಮಾಹಿತಿ ನೀಡಿದವರನ್ನು, ವಾಹನಗಳನ್ನು ಒದಗಿಸಿದವರನ್ನು, ಹಣಕಾಸು ನೆರವು ನೀಡಿದವರೆಲ್ಲರನ್ನು ಶೀಘ್ರವೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯ ಹಿಂದೂ ಸಮಾಜ ಸುಹಾಸ್ ಕುಟುಂಬದ ಹಿಂದೆ ಇದೆ. ತನಿಖೆಯನ್ನು ಹಗುರವಾಗಿ ಪರಿಗಣಿಸಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇವೆ. ತನಿಖೆ ಯಾವ ರೀತಿ ಸಾಗುತ್ತಿದೆ ಎಂಬುದನ್ನು ನೋಡಿಕೊಂಡು ಈ ಬಗ್ಗೆ ತೀರ್ಮಾನಿಸುತ್ತೇವೆ’ ಎಂದು ತಿಳಿಸಿದರು.
ಬಿಜೆಪಿ ಅಧಿಕಾರದ ಅವಧಿಯಲ್ಲಿ ಸುಹಾಸ್ ಹೆಸರು ರೌಡಿ ಪಟ್ಟಿಗೆ ಸೇರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರೌಡಿ ಶೀಟ್ ತೆರೆಯುವುದು ಸಹಜ ಪ್ರಕ್ರಿಯೆ. ಹೋರಾಟಗಾರರನ್ನು ಮತ್ತು ಕೊಲೆಗಾರರನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗದು. ಶಾಸಕನಾಗುವ ಸಂದರ್ಭದಲ್ಲಿ ನನ್ನ ಮೇಲೂ ದೊಂಬಿ, ಕೊಲೆ ಯತ್ನದಂತಹ ಪ್ರಕರಣಗಳೂ ಸೇರಿ 27 ಮೊಕದ್ದಮೆಗಳಿದ್ದವು. ಸುಹಾಸ್ ಶೆಟ್ಟಿ ಕೂಡಾ ಸಿದ್ಧಾಂತಕ್ಕಾಗಿ ಹೋರಾಟ ಮಾಡುತ್ತಿದ್ದ ವ್ಯಕ್ತಿ’ ಎಂದರು.
‘ಪ್ರಕರಣದ ತನಿಖೆಯನ್ನು ಎನ್‌ಐಎಗೆ ಕೊಡಲಿಕ್ಕೆ ಆಗಲ್ಲ ಎಂದು ಘಟನೆ ನಡೆದ ಆರೇಳು ಗಂಟೆಗಳಲ್ಲೇ ಗೃಹಸಚಿವರು ಹೇಳಿಕೆ ನೀಡಲು ಬರುವುದಿಲ್ಲ. ಸರ್ಕೀಟ್ ಹೌಸ್‌ನಲ್ಲಿ ಮುಸಲ್ಮಾನರು ಬೆದರಿಸಿದ್ದಕ್ಕೆ ಅವರು ಆ ರೀತಿ ಹೇಳಿರಬಹುದು. ಇಂದೇ ಪ್ರತಿಭಟನೆ ನಡೆಸಲು ಮುಂದಾಗಿದ್ದೆವು. ದೇಶದ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯ ಕಾರಣ ತಾತ್ಕಾಲಿಕವಾಗಿ ಮುಂದೂಡಿದ್ದೇವೆ’ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಭಾಗಿರತಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.