
ಸುಬ್ರಹ್ಮಣ್ಯ: ಭಜನೆಯು ದೇವರನ್ನು ಒಲಿಸಲು ಇರುವ ಸುಲಭ ಮಾರ್ಗವಾಗಿದ್ದು, ಭಜನೆಯ ಮೂಲಕ ಭಕ್ತಿಯನ್ನು ದೇವರಿಗೆ ನೀಡಲು ಸಾಧ್ಯ. ಭಗವಂತನ ಸ್ತುತಿಯು ಬದುಕಿಗೆ ನೆಮ್ಮದಿಯನ್ನೂ ನೀಡುತ್ತದೆ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲ್ಲೂಕು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ಮಂಜುನಾಥೇಶ್ವರ ಭಜನಾ ಪರಿಷತ್, ತಾಲ್ಲೂಕು ಭಜನೋತ್ಸವ ಸಮಿತಿ ಸುಬ್ರಹ್ಮಣ್ಯ ವಲಯ ಹಾಗೂ ಸ್ಥಳೀಯ ಭಜಕರ ಸಹಯೋಗದಲ್ಲಿ ಕುಕ್ಕೆ ದೇವಳದ ರಥಬೀದಿ ಸಭಾಂಗಣದಲ್ಲಿ ಭಾನುವಾರ ನಡೆದ ತಾಲ್ಲೂಕು ಭಜನೋತ್ಸವ 2026ನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಧರ್ಮದಲ್ಲಿ ನಡೆಯುವ ದಾರಿಯನ್ನು ಭಜನಾ ಸಾಹಿತ್ಯ ನೀಡುತ್ತದೆ. ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ ಮೊಳಗಲು ಭಜನೆ ಅಡಿಗಲ್ಲಾಗಿದ್ದು, ಭಗವನ್ನಾಮ ಸ್ಮರಣೆಯು ಸರ್ವರನ್ನೂ ಒಗ್ಗಟ್ಟಾಗಿಸುತ್ತದೆ. ಆಧುನಿಕ ಯುಗದಲ್ಲಿ ಪೋಷಕರು ಮಕ್ಕಳಲ್ಲಿ ಭಜನೆಯ ಅರಿವನ್ನು ಬಿತ್ತುವಲ್ಲಿ ಶ್ರಮಿಸುವುದು ಅಗತ್ಯ ಎಂದರು.
ತಾಲ್ಲೂಕು ಭಜನೋತ್ಸವ ಸಮಿತಿ ಅಧ್ಯಕ್ಷ ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಿದ್ದರು.
ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಜನಜಾಗೃತಿ ವೇದಿಕೆ ಸುಳ್ಯ ತಾಲ್ಲೂಕು ಅಧ್ಯಕ್ಷ ಲೋಕನಾಥ್ ಅಮೆಚೂರು, ತಾಲ್ಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷೆ ವಿಮಲಾ ರಂಗಯ್ಯ, ಕಲಾವಿದ ಕೆ.ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ, ಸುಬ್ರಹ್ಮಣ್ಯದ ಅನುಗ್ರಹ ಎಜುಕೇಷನ್ ಟ್ರಸ್ಟ್ ಸಂಚಾಲಕ ಚಂದ್ರಶೇಖರ ನಾಯರ್, ಐನೆಕಿದು ಸುಬ್ರಹ್ಮಣ್ಯ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಲ್.ವೆಂಕಟೇಶ್, ಭಜನಾ ಪರಿಷತ್ ತಾಲ್ಲೂಕು ಅಧ್ಯಕ್ಷ ಸೋಮಶೇಖರ್ ಪೈಕ, ಭಜನಾ ಪರಿಷತ್‌ನ ಸ್ಥಾಪಕಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ಭಜನಾ ಪರಿಷತ್ ವಲಯಾಧ್ಯಕ್ಷ ಚಂದ್ರಶೇಖರ ಕೊಂದಾಳ, ತಾಲ್ಲೂಕು ಯೋಜನಾಧಿಕಾರಿ ಮಾಧವ ಗೌಡ, ಭಜನೋತ್ಸವ ಸಮಿತಿ ಗೌರವಾಧ್ಯಕ್ಷ ಗಿರಿಧರ ಸ್ಕಂದ ಭಾಗವಹಿಸಿದ್ದರು.
ಗೌರವ ಸಲಹೆಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಜನೋತ್ಸವ ಸಮಿತಿ ಜತೆ ಕಾರ್ಯದರ್ಶಿ ಸತೀಶ್ ಟಿ.ಎನ್.ಕಲ್ಮಕಾರು ವಂದಿಸಿದರು.
ಕಾಶಿಕಟ್ಟೆ ಮಹಾಗಣಪತಿ ಸನ್ನಿಧಿಯಿಂದ ಮೆರವಣಿಗೆ ಆರಂಭವಾಯಿತು. ಮೆರವಣಿಗೆಯನ್ನು ಕಲಾವಿದ ಕೆ.ಯಜ್ಞೇಶ್ ಆಚಾರ್ ಉದ್ಘಾಟಿಸಿದರು. ವಿವಿಧ ಕಲಾತಂಡ, ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವರೆಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.