ADVERTISEMENT

ಸುರತ್ಕಲ್-BC ರೋಡ್‌ ಹೆದ್ದಾರಿ ನಿರ್ವಹಣೆ NHAIಗೆ: ಗಡ್ಕರಿಗೆ ಸಂಸದ ಚೌಟ ಮನವಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 3:08 IST
Last Updated 25 ಜುಲೈ 2025, 3:08 IST
ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಗುರುವಾರ ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದರು
ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಗುರುವಾರ ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದರು   

ಮಂಗಳೂರು:  ಸುರತ್ಕಲ್‌ -ಬಿ.ಸಿ. ರೋಡ್ ಹೆದ್ದಾರಿಯ ನಿರ್ವಹಣೆ ಹೊಣೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ವ್ಯಾಪ್ತಿಗೆ ತರುವ ಮೂಲಕ ಅದರ ಸಮರ್ಪಕ ನಿರ್ವಹಣೆ, ವಾಹನಗಳ ಸುಗಮ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಕೋರಿದರು. 

ಸಚಿವರನ್ನು ನವದೆಹಲಿಯಲ್ಲಿ ಗುರುವಾರ ಭೇಟಿಯಾದ ಸಂಸದ ಕ್ಯಾ.ಚೌಟ ಹಲವು ಮೂಲಸೌಕರ್ಯ ಯೋಜನೆಗಳ ಜಾರಿ ಕುರಿತು ಸಮಾಲೋಚನೆ ನಡೆಸಿದರು. 

‘ನವ ಮಂಗಳೂರಿನ ಬಂದರು ಸಂಪರ್ಕ ಹೆದ್ದಾರಿ ತೀರಾ ಹದಗೆಟ್ಟಿದೆ. ಬಿ.ಸಿ.ರೋಡ್‌– ಸುರತ್ಕಲ್‌ ಹೆದ್ದಾರಿಯು  ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್ (ಎನ್‌ಎಚ್‌ಎಲ್ಎಂಎಲ್‌) ವಿಶೇಷ ಉದ್ದೇಶದ ಘಟಕದ ಅಧೀನದಲ್ಲಿದೆ.  ಈ ಹೆದ್ದಾರಿ ನಿರ್ವಹಣೆಗೆ ನಿರ್ದಿಷ್ಟ ಏಜೆನ್ಸಿ ಇಲ್ಲ. ಅನುದಾನದ ಕೊರತೆಯೂ ಇದೆ. ಕಾಲ ಕಾಲಕ್ಕೆ ನಿರ್ವಹಣೆ ಸಾಧ್ಯವಾಗದೇ ಈ ಹೆದ್ದಾರಿ ಹದಗೆಟ್ಟಿದೆ.  ಮಳೆಗಾಲದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ವಾಹನ ಸಂಚಾರವೇ ದುಸ್ತರವಾಗಿದೆ’ ಎಂದು ಸಂಸದ ಕ್ಯಾ.ಚೌಟ ಅವರು ಸಚಿವರಿಗೆ ವಿವರಿಸಿದರು.

ADVERTISEMENT

ವರ್ತುಲ ರಸ್ತೆ: ಮಂಗಳೂರಿನಲ್ಲಿ ಈಚೆಗೆ ಕೆಲವೆಡೆ ವಾಹನ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ.  ಜನದಟ್ಟನೆ ಹಾಗೂ ಸಂಚಾರ ಸಮಸ್ಯೆಗೆ ದೂರದೃಷ್ಟಿಯ ಪರಿಹಾರ ಕಂಡುಕೊಳ್ಳುವ ಸಲುವಾಗಿ ಎನ್‌ಎಚ್‌ 66 ಮತ್ತು ಎನ್ಎಚ್‌ 75 ಹೆದ್ದಾರಿಗಳನ್ನು ಸಂಪರ್ಕಿಸಿ  ವರ್ತುಲ ರಸ್ತೆ ನಿರ್ಮಿಸಬೇಕು ಎಂದು ಸಂಸದರು ಸಚಿವರನ್ನು ಕೋರಿದರು.

ಶಿರಾಡಿ ಘಾಟಿ ಭಾಗದಲ್ಲಿ ರಸ್ತೆ ಹಾಗೂ ರೈಲು ಹಳಿಗಳ ಅಭಿವೃದ್ದಿ ಕಾಮಗಾರಿಗೆ ರೈಲ್ವೆ ಇಲಾಖೆ ಹಾಗೂ ಎನ್‌ಎಚ್‌ಎಐ ಜಂಟಿ ಸಮೀಕ್ಷೆ ಕೈಗೊಳ್ಳಬೇಕು. ಅದಕ್ಕೆ ಸಂಬಂಧಿಸಿದ ಡಿಪಿಆರ್‌ ಮೇಲ್ವಿಚಾರಣೆಗೆ ತಜ್ಞರ ಸಮಿತಿ ನೇಮಿಸುವಂತೆ ರೈಲ್ವೆ ಸಚಿವಾಲಯದ ಜೊತೆ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿದರು.

‘ಕೆಂಪುಕಲ್ಲು ಮರಳು ಸಮಸ್ಯೆ ನೀಗಿಸಿ’

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಹಾಗೂ ಮರಳು ಅಭಾವದಿಂದ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ  ಕುಟುಂಬಗಳ ಹಿತ ಕಾಪಾಡಲು ರಾಜ್ಯ ಸರ್ಕಾರ  ಅಗತ್ಯ ಕ್ರಮವಹಿಸಬೇಕು ಎಂದು ಕ್ಯಾ.ಬ್ರಿಜೇಶ್‌ ಚೌಟ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.