ಮಂಗಳೂರು: ಕೆಲ ದಿನಗಳ ಹಿಂದೆ ನಗರದ ಹೊರವಲಯದ ಸೋಮೇಶ್ವರ ಸಮೀಪ ರೆಸಾರ್ಟ್‌ವೊಂದರ ಈಜುಕೊಳದಲ್ಲಿ ಮೈಸೂರಿನ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿನಿಯರು ಮುಳುಗಿ ಮೃತಪಟ್ಟ ಬೆನ್ನಲ್ಲೇ ಈಜುಕೊಳಗಳ ಸುರಕ್ಷತೆ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ನಗರದಲ್ಲಿ ಸಾರ್ವಜನಿಕ, ಖಾಸಗಿ ಈಜುಕೊಳಗಳು ಜೊತೆಗೆ ಕೆಲವು ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳಲ್ಲಿ ಈಜುಕೊಳಗಳು ಇವೆ. ಲೇಡಿಹಿಲ್‌ನಲ್ಲಿ ಮಂಗಳಾ ಕ್ರೀಡಾಂಗಣದ ಸಮೀಪ ಇರುವ ಸಾರ್ವಜನಿಕ ಈಜುಕೊಳವನ್ನು ಮಹಾನಗರ ಪಾಲಿಕೆ ನಿರ್ವಹಣೆ ಮಾಡುತ್ತಿದೆ. 1986ರಲ್ಲಿ ನಿರ್ಮಾಣವಾಗಿರುವ ಈ ಈಜುಕೊಳ ಸದ್ಯ ಸಾರ್ವಜನಿಕರ ಬಳಕೆಗೆ ಲಭ್ಯವಿಲ್ಲ. ಮೂರು ತಿಂಗಳುಗಳಿಂದ ದುರಸ್ತಿ ಕಾರ್ಯ ನಡೆಯುತ್ತಿದ್ದು, 15–20 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಇನ್ನು ಸ್ಮಾರ್ಟ್‌ಸಿಟಿ ಅಡಿಯಲ್ಲಿ ನಿರ್ಮಾಣವಾಗಿರುವ ಎಮ್ಮೆಕೆರೆ, ಸೇಂಟ್ ಅಲೋಶಿಯಸ್ ಕಾಲೇಜಿನ ಈಜುಕೊಳಗಳನ್ನು ಖಾಸಗಿ ಕ್ಲಬ್‌ಗಳು ನಿರ್ವಹಣೆ ಮಾಡುತ್ತಿವೆ. ಸುರತ್ಕಲ್ ಎನ್ಐಟಿಕೆಯಲ್ಲಿ ಹೊಸದಾಗಿ ಈಜುಕೊಳ ನಿರ್ಮಿಸಲಾಗಿದೆ. ಶಿಕ್ಷಣ ಸಂಸ್ಥೆ, ಮೋತಿ ಮಹಲ್ ಹೋಟೆಲ್, ಈಡನ್ ಕ್ಲಬ್‌ನಲ್ಲಿ ಇರುವ ಈಜುಕೊಳಗಳನ್ನು ಆಯಾ ಸಂಸ್ಥೆಗಳೇ ನಿರ್ವಹಣೆ ಮಾಡುತ್ತವೆ. ಖಾಸಗಿ ಸ್ಥಳಗಳಲ್ಲಿ ಇರುವ ಈಜುಕೊಳಗಳಲ್ಲಿ ಜೀವ ರಕ್ಷಕ ಸಿಬ್ಬಂದಿ ಇದ್ದು, ಕೊಳ ತೆರೆದಿರುವ ವೇಳೆ ಕಡ್ಡಾಯವಾಗಿ ಸಿಬ್ಬಂದಿ ಇರುತ್ತಾರೆ ಎನ್ನುತ್ತಾರೆ ಆಯಾ ಸಂಸ್ಥೆಗಳ ಪ್ರಮುಖರು.
‘ಮೂರುವರೆ ದಶಕಗಳ ಹಿಂದಿನ ಈಜುಕೊಳದ ಚೇಂಬರ್‌ಗೆ ಸಮೀಪದ ಆಲದ ಮರದ ಬೇರು ಇಳಿದು, ನೀರು ಸೋರಿಕೆ ಆಗುತ್ತಿತ್ತು. ಆಗಸ್ಟ್‌ನಲ್ಲಿ ದುರಸ್ತಿ ಆರಂಭಿಸಿದ್ದು, ಈಗ ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೊಸ ಚೇಂಬರ್ ನಿರ್ಮಿಸಿ, ಪೈಪ್‌ಲೈನ್ ಅಳವಡಿಸಲಾಗಿದೆ. ಫಿಲ್ಟರ್ ಘಟಕ ನವೀಕರಿಸಲಾಗಿದೆ. ಪ್ರಸ್ತುತ ಸಂಸ್ಕರಿಸಿದ ನೀರನ್ನು ತುಂಬಿಸುವ ಕಾರ್ಯ ನಡೆಯುತ್ತಿದೆ. 50 ಮೀಟರ್ ಉದ್ದ, 15 ಮೀಟರ್ ಅಗಲವಿರುವ ಈಜುಕೊಳವು ನಾಲ್ಕು ಅಡಿಯಿಂದ ಆರಂಭಗೊಂಡು ಕೆಳಮುಖದಲ್ಲಿ 16 ಅಡಿಯವರೆಗೆ ಆಳ ಹೊಂದಿದೆ’ ಎನ್ನುತ್ತಾರೆ ಮಂಗಳಾ ಈಜುಕೊಳ ನಿರ್ವಹಿಸುವ ಅಧಿಕಾರಿಗಳು.
‘ಆಳ ಹೆಚ್ಚಿರುವುದರಿಂದ ಈ ಕೊಳದಲ್ಲಿ ಹೊಸದಾಗಿ ಕಲಿಯುವರಿಗೆ ತುಸು ಕಷ್ಟ. ಬೆಳಿಗ್ಗೆ 5 ಗಂಟೆಗೆ ಆರಂಭವಾಗುವ ಬ್ಯಾಚ್‌ನಲ್ಲಿ ಈಜುಪಟುಗಳಿಗೆ ಮಾತ್ರ ಪ್ರವೇಶ. ನಂತರ ಅನುಮತಿ ಪಡೆದ ಮೂರು ಕ್ಲಬ್‌ಗಳ ಕೋಚ್‌ಗಳು ಇರುತ್ತಾರೆ. ನಾಲ್ಕು ಲೈಫ್ ಗಾರ್ಡ್ಸ್ ಸ್ಥಳದಲ್ಲೇ ಇರುತ್ತಾರೆ. ಸಿಸಿಟಿವಿ ಕ್ಯಾಮೆರಾವನ್ನೂ ಅಳವಡಿಸಲಾಗಿದೆ. ಸುರಕ್ಷತೆಗೆ ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಯೊಬ್ಬರು.
ಸುರತ್ಕಲ್ ಎನ್‌ಐಟಿಕೆ ಆವರಣದಲ್ಲಿ ಹೊಸದಾಗಿ ಆರಂಭವಾಗಿರುವ ಈಜುಕೊಳವು ಎನ್‌ಐಟಿಕೆ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಮಾತ್ರ ಮೀಸಲಾಗಿದೆ. 10 ಲೇನ್‌ಗಳು ಇರುವ ಕೊಳದಲ್ಲಿ ಸ್ಪರ್ಧೆಗಳನ್ನು ನಡೆಸಲು ಅವಕಾಶ ಇದೆ. ಆದರೆ, ದೈನಂದಿನ ಬಳಕೆ ಕಾಲೇಜಿಗೆ ಸಂಬಂಧಪಟ್ಟವರಿಗೆ ಮಾತ್ರ ಸೀಮಿತ. ಕೊಳ ತೆರೆದಿರುವ ವೇಳೆ, ಎನ್‌ಐಎಸ್ ಪ್ರಮಾಣಪತ್ರ ಹೊಂದಿರುವ ಕೋಚ್‌ಗಳು, ಮೂರು ಲೈಫ್ ಗಾರ್ಡ್‌ಗಳು, ಸೆಕ್ಯುರಿಟಿ ಇರುತ್ತಾರೆ. ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ ಎನ್ನುತ್ತಾರೆ ಎನ್‌ಐಟಿಕೆಯ ವಿದ್ಯಾರ್ಥಿ ಚಟುವಟಿಕೆ ಮತ್ತು ಕ್ರೀಡಾಧಿಕಾರಿ ಹೇಮ್ ಪ್ರಸಾದ್ ನಾಥ್.
ಎಮ್ಮೆಕೆರೆ ಈಜುಕೊಳದಲ್ಲಿ ಮೂವರು ಪ್ರಮಾಣೀಕೃತ ಜೀವ ರಕ್ಷಕ ಸಿಬ್ಬಂದಿ ಇದ್ದಾರೆ. 4ರಿಂದ 7 ಅಡಿ ಆಳ ಇರುವ ಕೊಳದಲ್ಲಿ ಕಲಿಕಾರ್ಥಿಗಳಿಗೆ ಆರಂಭಿಕ ಭಾಗದಲ್ಲಿ ಮಾತ್ರ ಪ್ರವೇಶ ಇರುತ್ತದೆ. ಈ ಕೊಳಕ್ಕೆ ಬರುವವರಲ್ಲಿ ಹೆಚ್ಚಿನವರು ಕ್ರೀಡಾಪಟುಗಳು. ತರಬೇತುದಾರರು ಕೂಡ ನೀರಿನಲ್ಲೇ ಇರುವುದರಿಂದ, ಈಜುಗಾರರಿಗೆ ಯಾವುದೇ ತೊಂದರೆಯಾದರೂ ತಕ್ಷಣಕ್ಕೆ ಸ್ಪಂದಿಸುತ್ತಾರೆ. ಆರ್ಥಿಕ ಸಂಕಷ್ಟದಲ್ಲಿ ಈ ಕೊಳವನ್ನು ನಡೆಸುತ್ತಿದ್ದು, ಕ್ರೀಡಾಸ್ಫೂರ್ತಿಯ ಹುಮ್ಮಸ್ಸಿನಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎನ್ನುತ್ತಾರೆ ವಿ ಒನ್ ಅಕ್ವಾ ಸೆಂಟರ್ ನಿರ್ದೇಶಕರಾಗಿರುವ ಎಮ್ಮೆಕೆರೆ ಈಜುಕೊಳದ ಉಸ್ತುವಾರಿ ನವೀನ್.
ರಕ್ಷಣಾ ಕೌಶಲ ಬೇಕು: ಪ್ರತಿಯೊಬ್ಬ ಈಜುಪಟುವೂ ರಕ್ಷಣಾ ಕೌಶಲದ ಕನಿಷ್ಠ ಜ್ಞಾನ ಹೊಂದಿರಬೇಕು. ರೆಸಾರ್ಟ್‌ಗಳ ಈಜುಕೊಳಗಳು 4.5 ಅಡಿಗಿಂತ ಹೆಚ್ಚು ಆಳ ಇರದಿರುವುದೇ ಉತ್ತಮ. ಅಲ್ಲಿ ಬರುವವರಲ್ಲಿ ಹೆಚ್ಚಿನವರಿಗೆ ಈಜಿಗಿಂತ ಮೋಜು ಪ್ರಾಮುಖ್ಯವಾಗಿರುತ್ತದೆ. ಈಜುಕೊಳ ಇದ್ದಲ್ಲಿ ಜೀವ ರಕ್ಷಕ ಸಿಬ್ಬಂದಿ ಇರಲೇ ಬೇಕು. ನೀರಿನಲ್ಲಿ ಬಿದ್ದವರು ಬೊಬ್ಬೆ ಹೊಡೆದರೆ ಕೇಳುವಂತಿರಬೇಕು. ಈಜು ಗೊತ್ತಿಲ್ಲದವರು ನೀರಿಗಿಳಿಯುವಾಗ ಲೈಫ್ ಜಾಕೆಟ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬುದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಹರಿಶ್ಚಂದ್ರ ಅವರ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.