ADVERTISEMENT

ಕುಮಾರಪರ್ವತ: ಕಾಲು ಮುರಿದುಕೊಂಡಿದ್ದ ಯುವತಿಯ ಹೊತ್ತು ತಂದ ಟ್ಯಾಕ್ಸಿ ಚಾಲಕರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 11:19 IST
Last Updated 15 ಅಕ್ಟೋಬರ್ 2019, 11:19 IST
ಕುಮಾರಪರ್ವತ ಚಾರಣಕ್ಕೆ ತೆರಳಿದ್ದ  ಬೆಂಗಳೂರಿನ ಯುವತಿ ಜಾರಿಬಿದ್ದು ಗಾಯಗೊಂಡಿದ್ದು, ಟ್ಯಾಕ್ಸಿ ಚಾಲಕರು ಹೊತ್ತು ತಂದರು
ಕುಮಾರಪರ್ವತ ಚಾರಣಕ್ಕೆ ತೆರಳಿದ್ದ  ಬೆಂಗಳೂರಿನ ಯುವತಿ ಜಾರಿಬಿದ್ದು ಗಾಯಗೊಂಡಿದ್ದು, ಟ್ಯಾಕ್ಸಿ ಚಾಲಕರು ಹೊತ್ತು ತಂದರು   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ ಜಿಲ್ಲೆ): ಕುಮಾರಪರ್ವತಕ್ಕೆ ಚಾರಣಕ್ಕೆ ತೆರಳಿದ 23 ಜನ ಚಾರಣಿಗರ ಪೈಕಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಯುವತಿ ದಾರಿ ಮಧ್ಯೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, ಆಕೆಯನ್ನು ಸುಬ್ರಹ್ಮಣ್ಯದ ಟ್ಯಾಕ್ಸಿ ಚಾಲಕರು ಸುರಕ್ಷಿತವಾಗಿ ಹೊತ್ತು ತಂದಿದ್ದಾರೆ.

ಯುವಕ-ಯುವತಿಯರಿದ್ದ ಬೆಂಗಳೂರಿನ 23 ಮಂದಿ ಚಾರಣಿಗರ ತಂಡ ಪರ್ವತಕ್ಕೆ ಚಾರಣಕ್ಕೆ ತೆರಳಿತ್ತು. ಗಿರಿಗದ್ದೆ ಸಮೀಪ ತಂಡದಲ್ಲಿದ್ದ ಯುವತಿ ಕಾಲುಜಾರಿ ಬಿದ್ದಿದ್ದಾಳೆ. ಆಕೆಯ ಕಾಲು ಮುರಿದಿದೆ. ಈ ವಿಚಾರವನ್ನು ಚಾರಣಿಗರುಗಿರಿಗದ್ದೆಯ ಪುಷ್ಪಗಿರಿ ವನ್ಯಧಾಮದ ಶೆಡ್‌ನ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಅಧಿಕಾರಿಗಳು ಸುಬ್ರಹ್ಮಣ್ಯದ ಟ್ಯಾಕ್ಷಿ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಕುಸುಮಾಧರ ಅವರಿಗೆ ಕರೆ ಮಾಡಿ ಸಹಾಯ ಕೇಳಿದ್ದು ಅದರಂತೆ ಧರ್ಮಪಾಲ ಗೋಪಾಲ್, ಕೃಷ್ಣಕುಮಾರ್ ಶೆಟ್ಟಿ, ಜೀವನ್ ಗುತ್ತಿಗಾರು, ಸುಂದರ ಗೌಡ ಚೇರು ಎಂಬುವರ ಜತೆ ಸೇರಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸ್ಟ್ರೆಚರ್ ಪಡೆದು ಪರ್ವತಕ್ಕೆ ತೆರಳಿ ಯುವತಿಯನ್ನು ಅದರಲ್ಲಿ ಮಲಗಿಸಿ ಹೊತ್ತುಕೊಂಡು ಸುಬ್ರಹ್ಮಣ್ಯಕ್ಕೆತಂದಿದ್ದಾರೆ.

ADVERTISEMENT

ಸುಬ್ರಹ್ಮಣಕ್ಕೆ ತಲುಪಿದ ಬಳಿಕ ತಂಡದಲ್ಲಿದ್ದ ಇತರೆ ಚಾರಣಿಗರು ಆಕೆಯನ್ನು ಚಾರಣಕ್ಕೆ ಬಂದಿದ್ದ ವ್ಯಾನ್‌ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.