ADVERTISEMENT

ಮಂಗಳೂರು | ಶಿಕ್ಷಕರ ಸಮಸ್ಯೆ ಪರಿಹರಿಸಲು ಯತ್ನ: ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:04 IST
Last Updated 6 ಸೆಪ್ಟೆಂಬರ್ 2025, 4:04 IST
ಜಪ್ಪಿನಮೊಗರು ಪ್ರೆಸ್ಟೀಜ್ ಶಾಲೆ ಸಭಾಭವನದಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ದೀಪ ಬೆಳಗಿದರು
ಜಪ್ಪಿನಮೊಗರು ಪ್ರೆಸ್ಟೀಜ್ ಶಾಲೆ ಸಭಾಭವನದಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ದೀಪ ಬೆಳಗಿದರು   

ಮಂಗಳೂರು: ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಆಶ್ರಯದಲ್ಲಿ ಶುಕ್ರವಾರ ಇಲ್ಲಿ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ ಮತ್ತು ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪರಂಪರೆ ಉಳಿಸಿಕೊಂಡು ಹೋಗುವಂತೆ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಮಕ್ಕಳನ್ನು ದೇಶದ ಸಂಪತ್ತಾಗಿ ರೂಪಿಸಬೇಕು. ಪಠ್ಯೇತರ ಚಟುವಟಿಕೆಗಳಿಗೆ ಭಾರತದಲ್ಲಿ ಹೆಚ್ಚು ಮಹತ್ವ ನೀಡಲಗುತ್ತದೆ. ಈ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಕೆಲಸ ಆಗಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿ ನಿವೃತ್ತ ಪ್ರಾಧ್ಯಾಪಕ ಶಿವಪ್ರಕಾಶ್ ಮಾತನಾಡಿ, ಕೇರಳದ ಶಾಲೆಗಳಲ್ಲಿ ಶಿಕ್ಷಕರು ನಿವೃತ್ತರಾದ ಮರುದಿನವೇ ಹೊಸ ಶಿಕ್ಷಕರ ನೇಮಕ ಆಗುತ್ತದೆ. ಆದರೆ, ಕರ್ನಾಟಕದಲ್ಲಿ 70 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆ ಖಾಲಿಯಿದೆ. ಅಧಿಕಾರಶಾಹಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ಎದುರಾಗಿದೆಯೇ ವಿನಾ ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ ಎಂದರು.

ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ರಾಧಾಕೃಷ್ಣ ರೈ ಹಾಗೂ ನಯನಾ ಕೆ. ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪಂಚಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಕೆಎಂಕೆ ಮಂಜನಾಡಿ, ರಫೀಕ್ ತುಂಬೆ, ಜಯವಂತಿ ಸೋನ್ಸ್,ನವಾಝ್, ಶೇಖರ್ ಕಡ್ತಲ, ಪ್ರಮೀಳಾ, ರಾಧಾಕೃಷ್ಣ ರಾವ್, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಗೀತಾ ಇದ್ದರು. ‌

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಸ್ವಾಗತಿಸಿದರು. ಬಿಆರ್‌ಪಿ ತಹಸೀನ ಸನ್ಮಾನಪತ್ರ ವಾಚಿಸಿದರು. ಪ್ರಭಾರಿ ಸಮನ್ವಯಾಧಿಕಾರಿ ಸುಷ್ಮಾ ವಿ.ಕಿಣಿ ವಂದಿಸಿದರು. ಶಿಕ್ಷಕರಾದ ರಾಜೀವ ನಾಯಕ್ ಹಾಗೂ ಜಯಶ್ರೀ ನಾಯಕ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.