ADVERTISEMENT

ಮಂಗಳೂರು: ಶಾಲೆಗಳಿಗೆ ಶೇ.55ರಷ್ಟು ಪಠ್ಯಪುಸ್ತಕ ಪೂರೈಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:24 IST
Last Updated 13 ಮೇ 2025, 15:24 IST
ಶಾಲೆಯ ಕೊಠಡಿಯೊಂದರಲ್ಲಿ ದಾಸಾನ್ತು ಮಾಡಿರುವ ಹೊಸ ಪಠ್ಯಪುಸ್ತಕಗಳು
ಶಾಲೆಯ ಕೊಠಡಿಯೊಂದರಲ್ಲಿ ದಾಸಾನ್ತು ಮಾಡಿರುವ ಹೊಸ ಪಠ್ಯಪುಸ್ತಕಗಳು   

ಮಂಗಳೂರು: ಬೇಸಿಗೆ ರಜೆಯ ಖುಷಿಯಲ್ಲಿರುವ ಮಕ್ಕಳು ಇನ್ನೆರಡು ವಾರಗಳಲ್ಲಿ ಶಾಲೆಗೆ ಹೊರಡಲು ಅಣಿಯಾಗಲಿದ್ದಾರೆ. ಶೈಕ್ಷಣಿಕ ವರ್ಷದ ಆರಂಭದ ದಿನವೇ ಮಕ್ಕಳಿಗೆ ಹೊಸ ಪಠ್ಯಪುಸ್ತಕ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಈಗಾಗಲೇ ಶೇ 55ರಷ್ಟು ಪಠ್ಯಪುಸ್ತಕಗಳು ಜಿಲ್ಲೆಗೆ ಪೂರೈಕೆಯಾಗಿವೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತವಾಗಿ ಮತ್ತು ಅನುದಾನರಹಿತ ಶಾಲೆಗಳಿಗೆ ನಿಗದಿತ ದರದಲ್ಲಿ ಸರ್ಕಾರ ಪಠ್ಯಪುಸ್ತಕಗಳನ್ನು ಸರಬರಾಜು ಮಾಡುತ್ತದೆ. ಜಿಲ್ಲೆಯಿಂದ ಈ ಬಾರಿ 19.66 ಲಕ್ಷ ಉಚಿತ ಹಾಗೂ 15.69 ಲಕ್ಷ ಮಾರಾಟದ ಪಠ್ಯಪುಸ್ತಕಗಳು ಸೇರಿ ಒಟ್ಟು 35.35 ಲಕ್ಷ ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿದೆ. ಅವುಗಳಲ್ಲಿ 19.74 ಲಕ್ಷ ಪಠ್ಯಪುಸ್ತಕಗಳು ಪೂರೈಕೆಯಾಗಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಬಂಟ್ವಾಳ ತಾಲ್ಲೂಕಿನಲ್ಲಿ ಗರಿಷ್ಠ 7.61 ಲಕ್ಷ ಪಠ್ಯಪುಸ್ತಕಗಳ ಬೇಡಿಕೆ ಇದೆ. ಬೆಳ್ತಂಗಡಿ 4.99 ಲಕ್ಷ, ಮಂಗಳೂರು ಉತ್ತರ 6.17 ಲಕ್ಷ, ಮಂಗಳೂರು ದಕ್ಷಿಣ 6.16 ಲಕ್ಷ, ಮೂಡುಬಿದಿರೆ 2.09 ಲಕ್ಷ, ಪುತ್ತೂರು 5.83 ಲಕ್ಷ, ಸುಳ್ಯ 2.48 ಲಕ್ಷ ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಕೆಯಾಗಿದೆ. ಮುಖ್ಯ ಶಿಕ್ಷಕರ ಮೂಲಕ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು. 

ADVERTISEMENT

6ರಿಂದ 10ನೇ ತರಗತಿವರೆಗೆ ಮೂರು ಕೋರ್ ವಿಷಯ, ಮೂರು ಭಾಷಾ ವಿಷಯ ಹಾಗೂ ದೈಹಿಕ ಶಿಕ್ಷಣ ಸೇರಿ ಒಟ್ಟು ಏಳು ವಿಷಯಗಳು ಇರುತ್ತವೆ. ಇವುಗಳ ಒಟ್ಟು 14 ಟೈಟಲ್‌ಗಳ ಪುಸ್ತಕಗಳು, 1ರಿಂದ 5ನೇ ತರಗತಿಗೆ ನಾಲ್ಕು ವಿಷಯಗಳು ಇದ್ದು, ಎಂಟು ಟೈಟಲ್‌ಗಳ ಪುಸ್ತಕಗಳು ಪೂರೈಕೆಯಾಗುತ್ತವೆ. ಪ್ರೌಢಶಾಲಾ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು, 8ರಿಂದ 10ನೇ ತರಗತಿವರೆಗೆ ಏಳು ಟೈಟಲ್‌ಗಳ ಪುಸ್ತಕಗಳು ಸರಬರಾಜಾಗಿವೆ. ಇನ್ನು ಒಂದು ವಾರದಲ್ಲಿ ಎಲ್ಲ ಪುಸ್ತಕಗಳೂ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪುಸ್ತಕಗಳು ಬರುತ್ತವೆ. ಈಗಾಗಲೇ ಬಂದಿರುವ ಪುಸ್ತಕಗಳನ್ನು ಒಂದು ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ಆಯಾ ಶಾಲೆಯ ಬೇಡಿಕೆ ಪರಿಶೀಲಿಸಿ, ವಿಷಯವಾರು ಪುಸ್ತಕಗಳನ್ನು ಪ್ರತ್ಯೇಕಿಸಿ, ಶಾಲೆಗೆ ತಲುಪಿಸಲಾಗುತ್ತದೆ. ಶಾಲೆ ಆರಂಭವಾಗುವ ಎರಡು ದಿನ ಮೊದಲು ಸ್ವಚ್ಛತಾ ಕಾರ್ಯ ನಡೆಯುತ್ತದೆ. ಅಷ್ಟರೊಳಗೆ ಎಲ್ಲ ಪಠ್ಯಪುಸ್ತಕಗಳನ್ನು ಶಾಲೆಗೆ ತಲುಪಿಸಲಾಗುತ್ತದೆ. ಪ್ರಾರಂಭೋತ್ಸವದ ದಿನವೇ ಅವುಗಳನ್ನು ಮಕ್ಕಳಿಗೆ ಕೊಡಬೇಕು ಎಂಬುದು ಇಲಾಖೆಯ ಯೋಜನೆಯಾಗಿದೆ’ ಎಂದು ಮಂಗಳೂರು ದಕ್ಷಿಣದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.