ADVERTISEMENT

ಮಂಜೇಶ್ವರ ಪೊಲೀಸರನ್ನು ಮಂಗಳೂರಿಗೆ ತಂದ ಬೋಟ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 20:52 IST
Last Updated 21 ಡಿಸೆಂಬರ್ 2020, 20:52 IST

ಮಂಗಳೂರು: ಮಂಜೇಶ್ವರ ಸಮುದ್ರದಲ್ಲಿ ಬೋಟ್‌ನ ಮೂಲಕ ಬಂದ ತಂಡವೊಂದು ಇಬ್ಬರು ಪೊಲೀಸರನ್ನು ಅಪಹರಿಸಿದ್ದು, ಬಳಿಕ ಅವರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಕುಂಬಳೆ ಶಿರಿಯದ ಕರಾವಳಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ತಂಡವು ತಪಾಸಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಣಿಯ ಬೋಟ್‌ನ ದಾಖಲೆಗಳನ್ನು ತಪಾಸಣೆ ನಡೆಸಿದ್ದು, ಕೆಲ ಸಂಶಯ ಬಂದಿದ್ದರಿಂದ ಪೊಲೀಸರು ಬೋಟ್‌ ಅನ್ನು ವಶಕ್ಕೆ ಪಡೆದಿದ್ದರು.

ಬಳಿಕ ಬೋಟ್ ಅನ್ನು ಮಂಜೇಶ್ವರ ಬಂದರಿಗೆ ಒಯ್ಯುವಂತೆ ಸೂಚನೆ ನೀಡಲಾಗಿತ್ತು. ಈ ಬೋಟ್‌ಗೆ ರಘು ಮತ್ತು ಸುದೀಶ್ ಎಂಬ ಪೊಲೀಸರನ್ನು ಹತ್ತಿಸಲಾಗಿತ್ತು. ಸಬ್ ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ಹಾಗೂ ಇತರ ಪೊಲೀಸರು, ಮಂಜೇಶ್ವರ ಬಂದರಿಗೆ ತಲುಪಿ ಗಂಟೆಗಳಾದರೂ ವಶಕ್ಕೆ ಪಡೆದ ಬೋಟ್ ತಲುಪಿರಲಿಲ್ಲ.

ADVERTISEMENT

ಬೋಟ್‌ನಲ್ಲಿದ್ದ ಪೊಲೀಸರನ್ನು ಸಂಪರ್ಕಿಸಿದಾಗ ಬೋಟ್ ವೇಗವಾಗಿ ಇನ್ನೊಂದು ಕಡೆಗೆ ತೆರಳುತ್ತಿರುವ ಮಾಹಿತಿ ದೊರೆತಿತ್ತು. ಕೂಡಲೇ ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು, ಮಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬೋಟ್ ಮಂಗಳೂರು ಬಂದರು ತಲುಪಿದ್ದು, ಇಬ್ಬರು ಪೊಲೀಸರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೋಟ್‌ನಲ್ಲಿ 12 ಮಂದಿ ಇದ್ದು, ಅಗತ್ಯ ದಾಖಲೆ ಇಲ್ಲದಿರುವುದರಿಂದ ವಶಕ್ಕೆ ಪಡೆಯಲಾಗಿತ್ತು ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.