ADVERTISEMENT

ಸಿಎಎ, ಎನ್‌ಆರ್‌ಸಿ ಹೋರಾಟ ಮುಂದುವರಿಯಲಿದೆ

ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌.ಮೊಹಮ್ಮದ್ ಮಸೂದ್‌

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 10:29 IST
Last Updated 19 ಜನವರಿ 2020, 10:29 IST

ಮಂಗಳೂರು: ‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ನಮ್ಮ ಹೋರಾಟ ಅಡ್ಯಾರ್‌– ಕಣ್ಣೂರು ಪ್ರತಿಭಟನೆಗೆ ಮುಗಿದಿಲ್ಲ. ಈಗಷ್ಟೇ ಹೋರಾಟ ಆರಂಭವಾಗಿದ್ದು, ಅದು ಮುಂದುವರಿಯಲಿದೆ’ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್‌.ಮೊಹಮ್ಮದ್ ಮಸೂದ್‌ ಹೇಳಿದರು.

ಸಮಿತಿಯ ಮುಖಂಡರೊಂದಿಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ಹಂತದ ಹೋರಾಟ ಮುಗಿದಿದೆ. ಸಿಎಎ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ತೀರ್ಪು ಬರುವವರೆಗೂ ಜನರು ತಾಳ್ಮೆಯಿಂದ ಇರಬೇಕು. ನಂತರದಲ್ಲಿ ಹೋರಾಟದ ಮುಂದಿನ ಹೆಜ್ಜೆಯ ಕುರಿತು ನಿರ್ಧರಿಸಲಾಗುವುದು’ ಎಂದರು.

ಸಮಾವೇಶ ನಡೆದ ಸ್ಥಳ ಮತ್ತು ಹೆದ್ದಾರಿಯಲ್ಲಿ ಬಿದ್ದಿದ್ದ ಕುಡಿಯುವ ನೀರಿನ ಪ್ಲಾಸ್ಟಿಕ್‌ ಬಾಟಲಿಗಳನ್ನು ಮರುದಿನವೇ ತೆರವುಗೊಳಿಸಲಾಗಿದೆ. ಇಡೀ ಸಮಾವೇಶದ ಯಶಸ್ಸಿಗೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ಸ್ವಯಂಸೇವಕರು ಶ್ರಮಿಸಿದ್ದಾರೆ. ಎಲ್ಲರ ಸಹಕಾರದಿಂದ ಪ್ರತಿಭಟನೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಯಿತು ಎಂದರು.

ADVERTISEMENT

ಹಿಂಪಡೆಯಲು ಆಗ್ರಹ: ಸಮಿತಿಯ ಉಪಾಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಮಾತನಾಡಿ, ‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದೆಲ್ಲೆಡೆ ಪ್ರತಿರೋಧದ ಕಾವು ಎದ್ದಿದೆ. ಕರಾವಳಿಯಲ್ಲೂ ಅಡ್ಯಾರ್‌ ಪ್ರತಿಭಟನೆಯ ಮೂಲಕ ದೊಡ್ಡ ವಿರೋಧ ಗೋಚರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇನ್ನಾದರೂ ಮರು ಚಿಂತನೆ ನಡೆಸಿ ಈ ಕಾಯ್ದೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಬಿ.ಎಂ.ಮುಮ್ತಾಝ್ ಅಲಿ, ಸೈಯದ್ ಅಹ್ಮದ್ ಬಾಷಾ ತಂಞಳ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಸಮಾವೇಶ ಸಂಘಟನಾ ಸಮಿತಿಯ ಸಂಯೋಜಕರಾದ ಎಸ್.ಎಂ.ರಶೀದ್, ಖಾಸಿಮ್ ಅಹ್ಮದ್ ಎಚ್.ಕೆ., ಮನ್ಸೂರ್ ಅಹ್ಮದ್ ಅಝಾದ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.