ADVERTISEMENT

‘ಮಾನವೀಯತೆಯ ಭಕ್ತಿ ಬೀಜ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 5:59 IST
Last Updated 6 ಡಿಸೆಂಬರ್ 2022, 5:59 IST
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸೋಮವಾರ ನಡೆದ ‘ಕನ್ನಡ ಕೃತಿಗಳ ಓದು -ವಿಮರ್ಶೆ’ ಕಾರ್ಯಕ್ರಮದಲ್ಲಿ ಡಾ. ಶಿವರಾಜ ಶಾಸ್ತ್ರಿ ಹೇರೂರು ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ. ಕಲ್ಯಾಣರಾವ್ ಜಿ. ಪಾಟೀಲ, ಡಾ.ಕುರಿಯನ್ ಇದ್ದರು
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಸೋಮವಾರ ನಡೆದ ‘ಕನ್ನಡ ಕೃತಿಗಳ ಓದು -ವಿಮರ್ಶೆ’ ಕಾರ್ಯಕ್ರಮದಲ್ಲಿ ಡಾ. ಶಿವರಾಜ ಶಾಸ್ತ್ರಿ ಹೇರೂರು ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ. ಕಲ್ಯಾಣರಾವ್ ಜಿ. ಪಾಟೀಲ, ಡಾ.ಕುರಿಯನ್ ಇದ್ದರು   

ಮೂಡುಬಿದಿರೆ: ‘ನಮ್ಮ ಕವಿಗಳು ಮಾನವೀಯತೆಯೆಂಬ ಭಕ್ತಿಯ ಬೀಜವನ್ನು ತಮ್ಮ ಕೃತಿಗಳ ಮೂಲಕ ಬಿತ್ತಿದ್ದಾರೆ’ ಎಂದು ಕಲಬುರಗಿಯ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರಿ ಹೇರೂರು ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ನಡೆದ ‘ಕನ್ನಡ ಕೃತಿಗಳ ಓದು -ವಿಮರ್ಶೆ’ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈ ನಾಡು ಆ ನಾಡು ಎಂಬುದು ಕೇವಲ ನಾಮಮಾತ್ರ. ನಾವೆಲ್ಲರೂ ಒಂದೇ ನಾಡಿನವರು. ಕುವೆಂಪುರವರ ರಾಮಾಯಣ ದರ್ಶನಂ ನಾವೆಲ್ಲರೂ ಓದಬೇಕಾದ ಕೃತಿ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ಸರ್ಕಾರಿ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕಲ್ಯಾಣರಾವ್ ಜಿ. ಪಾಟೀಲ ಮಾತನಾಡಿ, ‘ಕನ್ನಡಿಗರು ಪ್ರಪಂಚದ ಯಾವುದೇ ಭಾಗದಲ್ಲಿದ್ದರು ಕನ್ನಡದ ಮಕ್ಕಳೇ. ಅವರಿಗೆ ಜಾಗದ ಗಡಿಯಿಲ್ಲ. ಕನ್ನಡ ಕಾವ್ಯಗಳು ನಮ್ಮ ಬದುಕಿಗೆ ಬೆಳಕನ್ನು ಕೊಡುವ ಶಕ್ತಿಯಾದರೆ ಕನ್ನಡ ನಾಡು ಅನೇಕ ಧರ್ಮಗಳಿಂದ ಕೂಡಿದ ಕಾಮಧೇನು’ ಎಂದರು.

ADVERTISEMENT

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಆರಂಭದಲ್ಲಿ ಕುವೆಂಪು ಸಾಹಿತ್ಯ ಜೀವನದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಸ್ಮಿತಾ ಭಟ್ ನಿರೂಪಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ. ಜಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.