ADVERTISEMENT

ತುಳು ಸಿನಿಮಾಗಳಿಗೆ ಹೊಸ ವೇದಿಕೆ

ಸದ್ದು ಮಾಡಲಿದೆ ‘ನಮ್ಮ ಕುಡ್ಲ ಟಾಕೀಸ್‌’

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 8:11 IST
Last Updated 16 ಫೆಬ್ರುವರಿ 2021, 8:11 IST
ನಮ್ಮ ಕುಡ್ಲದ ಲೋಗೊ
ನಮ್ಮ ಕುಡ್ಲದ ಲೋಗೊ   

ಮಂಗಳೂರು: ಕೋಸ್ಟಲ್‌ವುಡ್‌ ಸಿನಿಮಾಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ಥಿಯೇಟರ್‌ಗಳೇ ಪ್ರಾಣವಾಯು. ಆದರೆ, ಕರಾವಳಿಯಲ್ಲಿ ವರ್ಷದಿಂದ ವರ್ಷಕ್ಕೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ತುಳು ಚಿತ್ರೋದ್ಯಮಕ್ಕೆ ಭಾರಿ ಹೊಡೆತ ನೀಡಿದೆ. ಇದನ್ನು ಅರಿತ ‘ನಮ್ಮ ಕುಡ್ಲ’ ತಂಡವು ತುಳು ಸಿನಿಮಾಗಳನ್ನು ಜನರಿಗೆ ತಲುಪಿಸಲು ಹೊಸ ವೇದಿಕೆಯಲ್ಲಿ ಸೃಷ್ಟಿಸಿದೆ.

ಪ್ರಸ್ತುತ ಕೋಸ್ಟಲ್‌ವುಡ್‌ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಅರಿತುಕೊಂಡು ಕರ್ಕೇರ ಸಹೋದರರ ‘ನಮ್ಮ ಕುಡ್ಲ’ ತಂಡವು ಹೊಸ ಭರವಸೆಯನ್ನು ಹುಟ್ಟಿಹಾಕಿದೆ. ನಾಡು, ನುಡಿ, ಸಂಸ್ಕೃತಿಯ ಸೇವೆ ಮಾಡಿಕೊಂಡು ಬರುತ್ತಿರುವ ಈ ತಂಡವು ಇದೀಗ ‘ನಮ್ಮ ಕುಡ್ಲ ಟಾಕೀಸ್‌’ ಎಂಬ ಹೊಸ ಪರಿಕಲ್ಪನೆಯನ್ನು ಮಾರ್ಚ್‌ನಲ್ಲಿ ಪರಿಚಯಿಸಲಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಮುಂಚೆಯೇ ತುಳು ಸಿನಿಮಾವನ್ನು ಮನೆಯಲ್ಲಿಯೇ ಕುಟುಂಬದೊಂದಿಗೆ ವೀಕ್ಷಿಸಲು ಅವಕಾಶ ಸಿಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್‌ ಮೊದಲ ಭಾನುವಾರವೇ ಹೊಸ ತುಳು ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

‘ತುಳು ಚಿತ್ರರಂಗವನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದೇನೆ. ಸಿನಿಮಾಕ್ಕೆ ಹಾಕಿದ ಬಂಡವಾಳ ವಾಪಸ್‌ ಪಡೆಯುವುದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಕೆಲವು ಚಿತ್ರಗಳು ಗೆದ್ದಿವೆ, ಇನ್ನು ಕೆಲವು ಸೋತಿವೆ. ತುಳು ಸಿನಿಮಾಕ್ಕೆ ಹೊಸ ಮಾರುಕಟ್ಟೆ ಒದಗಿಸುವ ದೃಷ್ಟಿಯಲ್ಲಿ ನಾವು ‘ನಮ್ಮ ಕುಡ್ಲ ಟಾಕೀಸ್‌’ ಪರಿಚಯಿಸುತ್ತಿದ್ದೇವೆ. ಸಾಮಾನ್ಯವಾಗಿ ವಾರಾಂತ್ಯದ ದಿನದಲ್ಲಿ ಕುಟುಂಬದೊಂದಿಗೆ ಚಿತ್ರಮಂದಿರ ಅಥವಾ ಮಾಲ್‌ಗೆ ಹೋಗಿ ಚಿತ್ರ ವೀಕ್ಷಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಅದೇ ‘ನಮ್ಮ ಕುಡ್ಲ ಟಾಕೀಸ್‌’ ವಾಹಿನಿಯಲ್ಲಿ ಹೊಸ ತುಳು ಸಿನಿಮಾವನ್ನು ಕೇವಲ ₹ 120ಕ್ಕೆ ಮನೆಯಲ್ಲಿಯೇ ಕುಟುಂಬದೊಂದಿಗೆ ವೀಕ್ಷಿಸಲು ಆಫರ್‌ ನೀಡುತ್ತಿದ್ದೇವೆ’ ಎನ್ನುತ್ತಾರೆ ‘ನಮ್ಮ ಕುಡ್ಲ’ದ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ.

ADVERTISEMENT

‘ನಿರ್ಮಾಪಕರು ಬೇಡಿಕೆಯಿಟ್ಟ ಸೆನ್ಸಾರ್‌ ಆದ ಚಿತ್ರಗಳನ್ನು 8 ತಜ್ಞರ ತಂಡ ವೀಕ್ಷಣೆ ಮಾಡಿ, ಗುಣಮಟ್ಟವನ್ನು ಪರಿಶೀಲಿಸುತ್ತದೆ. ಆ ತಂಡವು ಗ್ರೀನ್‌ ಸಿಗ್ನಲ್‌ ನೀಡಿದ ಬಳಿಕ ಚಿತ್ರತಂಡದ ಜತೆ ಒಪ್ಪಂದ ಮಾಡಲಾಗುತ್ತದೆ. ಬಳಿಕ ಒಂದು ತಿಂಗಳ ಮಟ್ಟಿಗೆ ಅದರ ಪ್ರಸಾರದ ಹಕ್ಕನ್ನು ಪಡೆಯುತ್ತೇವೆ. ಅದಕ್ಕೆ ನಿರ್ದಿಷ್ಟ ಹಣವನ್ನು ಚಿತ್ರತಂಡಕ್ಕೆ ನೀಡುತ್ತೇವೆ. ಆ ಸಿನಿಮಾವನ್ನು ಪ್ರತಿ ಭಾನುವಾರ ಮಧ್ಯಾಹ್ನ, ಸಂಜೆ, ರಾತ್ರಿ ಮೂರು ಶೋನಲ್ಲಿ ‘ನಮ್ಮ ಕುಡ್ಲ ಟಾಕೀಸ್‌’ ವಾಹಿನಿಯಲ್ಲಿ ಪ್ರಸಾರ ಮಾಡುತ್ತೇವೆ. ಒಂದು ತಿಂಗಳಲ್ಲಿ ನಾಲ್ಕು ಭಾನುವಾರದಂತೆ ಒಟ್ಟು 12 ಶೋ ಪ್ರಸಾರವಾಗಲಿದೆ. ಈ ಮಧ್ಯೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವಂತಿಲ್ಲ. ಪ್ರೀಮಿಯರ್‌ ಶೋಗೆ ಚಿತ್ರತಂಡಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ತಿಂಗಳ ಒಪ್ಪಂದ ಮುಗಿದ ಬಳಿಕ ಆ ಸಿನಿಮಾವನ್ನು ಚಿತ್ರತಂಡವು ಎಲ್ಲಿ ಬೇಕಾದರೂ ಪ್ರದರ್ಶಿಸಬಹುದು’ ಎನ್ನುತ್ತಾರೆ ಅವರು.

‘ನಮ್ಮ ಕುಡ್ಲ ಟಾಕೀಸ್‌’ ವಾಹಿನಿಯನ್ನು ಇದೇ 18ರಂದು ಉದ್ಘಾಟಿಸಲಾಗುತ್ತದೆ. ಈ ವಾಹಿನಿಯಲ್ಲಿ ಭಾನುವಾರ ನಿಗದಿತ ಸಮಯಕ್ಕೆ ಮಾತ್ರ ಸಿನಿಮಾ ಪ್ರಸಾರವಾಗುತ್ತದೆ. ಇತರ ವೇಳೆಯಲ್ಲಿ ಯಾವುದೇ ಕಾರ್ಯಕ್ರಮ ಇರುವುದಿಲ್ಲ. ಗ್ರಾಹಕರು ಕೇಬರ್‌ ಆಪರೇಟರ್‌ ಮೂಲಕ ₹ 120 ಪಾವತಿಸಿ, ಸಂಪರ್ಕ ಪಡೆಯಬಹುದು. ಎಚ್‌ಡಿ ಸಂಪರ್ಕಕ್ಕೆ ₹ 160 ನಿಗದಿ ಮಾಡಲಾಗಿದೆ. ಥಿಯೇಟರ್‌ನಲ್ಲಿರುವಂತೆ ಚಿತ್ರದ ಆರಂಭದಲ್ಲಿ, ಮಧ್ಯಂತರದಲ್ಲಿ ಮಾತ್ರ ಜಾಹೀರಾತು ಇರುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿರುವ ಕೇಬಲ್‌ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು’ ಎಂದು ಅವರು ಹೇಳುತ್ತಾರೆ.

ಮಾರುಕಟ್ಟೆ ತುಂಬಾ ಚಿಕ್ಕದು: ಕೋಸ್ಟಲ್‌ವುಡ್‌ನಲ್ಲಿ 2018ರಲ್ಲಿ 15 ಸಿನಿಮಾ, 2019ರಲ್ಲಿ 10 ಸಿನಿಮಾಗಳು ತೆರೆಗೆ ಬಂದಿದ್ದವು. ಕಳೆದ ಐದಾರು ವರ್ಷಗಳಲ್ಲಿ ಸರಾಸರಿ ವರ್ಷಕ್ಕೆ 10 ಸಿನಿಮಾದಂತೆ ಬಿಡುಗಡೆಯಾಗಿದೆ. ಕಳೆದ ಒಂದು ವರ್ಷದಿಂದ ಕೋವಿಡ್‌ ಕಾರಣಕ್ಕಾಗಿ ಸಿನಿಮಾಗಳು ಬಿಡುಗಡೆಯಾಗಿಲ್ಲ. ಇದೀಗ 10ಕ್ಕೂ ಹೆಚ್ಚು ಸಿನಿಮಾಗಳು ಸೆನ್ಸಾರ್‌ ಮುಗಿಸಿ, ಚಿತ್ರಮಂದಿರಕ್ಕಾಗಿ ಕಾಯುತ್ತಿವೆ. ಅಲ್ಲದೆ, ಇನ್ನೂ ಸಾಕಷ್ಟು ಸಿನಿಮಾಗಳು ಚಿತ್ರೀಕರಣ ಹಂತದಲ್ಲಿವೆ. ತುಳು ಸಿನಿಮಾದ ಮಾರುಕಟ್ಟೆ ತುಂಬಾ ಚಿಕ್ಕದಾಗಿರುವುದಿಂದ ಅದನ್ನು ಬಿಡುಗಡೆ ಮಾಡುವ ಮುನ್ನ ಲೆಕ್ಕಾಚಾರ ಅಗತ್ಯ. ಲೆಕ್ಕಾಚಾರವಿಲ್ಲದೆ ತೆರೆಗೆ ಬಂದ ಹಲವು ಚಿತ್ರಗಳ ನಿರ್ಮಾಪಕರು ಕೈಸುಟ್ಟುಕೊಂಡಿದ್ದು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.