ADVERTISEMENT

ಮಂಗಳೂರು: ಪಾಲಿಕೆ ಅಧಿಕಾರಿಗಳ ಹೆಸರಿನಲ್ಲಿ ಕಳವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 3:00 IST
Last Updated 19 ನವೆಂಬರ್ 2021, 3:00 IST

ಮಂಗಳೂರು: ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ತಂಡವೊಂದು ಮಹಿಳೆಯನ್ನು ವಂಚಿಸಿದ್ದು, ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ದಡ್ಡಲ್‌ಕಾಡ್ ನಿವಾಸಿ ಮೀರಾ ಪೈ ಅವರ ಮನೆಗೆ ನ.16ರಂದು ಇಬ್ಬರು ಅಪರಿಚಿತರು ಬಂದಿದ್ದು, ‘ನಾವು ಪಾಲಿಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು. ನಿಮ್ಮ ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದಿದ್ದೇವೆ’ ಎಂದು ಹೇಳಿದ್ದರು. ಬಳಿಕ ಮನೆಯ ಟೆರಸಿಗೂ ತೆರಳಿ ನೀರಿನ ಟ್ಯಾಂಕ್ ಪರಿಶೀಲಿಸಿದ್ದಾರೆ. ಮಹಿಳೆ ಹಾಗೂ ಆರೋಪಿಗಳು ಟೆರಸಿಗೆ ತೆರಳಿದಾಗ, ಇನ್ನೊಬ್ಬ ಆರೋಪಿ ನೇರವಾಗಿ ಮನೆಗೆ ಪ್ರವೇಶಿಸಿದ್ದಾನೆ. ಕಪಾಟಿನ ಬಾಗಿಲು ತೆರೆದು 68 ಗ್ರಾಂ ಚಿನ್ನಾಭರಣ ಮತ್ತು ₹71 ಸಾವಿರ ನಗದು ದೋಚಿದ್ದಾರೆ. ಮಹಿಳೆ ಮನೆಯೊಳಗೆ ಬಂದ ಬಳಿಕ ಕಳವು ಮಾಡಿರುವುದು ಗೊತ್ತಾಗಿದೆ.ಈ ಬಗ್ಗೆ ಸ್ಥಳೀಯರಿಗೆ ಅನುಮಾನ ಬಂದಿದ್ದು, ಮಹಾನಗರ ಪಾಲಿಕೆಯ ಸಿಬ್ಬಂದಿ ಎಂಬುದಕ್ಕೆ ದಾಖಲೆ ಕೊಡಿ ಎಂದಾಗ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಗಾಂಜಾ: ಬಂಧನ

ADVERTISEMENT

ಮಂಗಳೂರು: ನಗರದ ಬಿಜೈ ಕಾಪಿಕಾಡ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇರೆಗೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ರುತಿನ್, ಹರಿಕೃಷ್ಣನ್ ಕೆ.ಆರ್., ಆಕಾಶ್ ಕೆ., ಅಕ್ಷಯ್, ಮಾರ್ಟಿನ್, ವಸಂತ್ ಕುಮಾರ್ ಬಂಧಿತರು. ಗುರುವಾರ ಬೆಳಿಗ್ಗೆ 4 ಗಂಟೆಗೆ ಉರ್ವ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಕಾಪಿಕಾಡ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಸಾಬೀತಾಯಿತು.

ಬಸ್‌ಗಳಿಗೆ ದಂಡ

ಮಂಗಳೂರು: ‘ಕನ್ನಡ ಅನುಷ್ಠಾನ ಮಾಡದ 22ಕ್ಕೂ ಹೆಚ್ಚು ಖಾಸಗಿ ಸಾರಿಗೆ ಬಸ್‌ಗಳಿಗೆ ದಂಡ ವಿಧಿಸಲಾಗಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಮೇಶ್‌ ಎಂ. ವರ್ಣೇಕರ್‌ ತಿಳಿಸಿದ್ದಾರೆ.

ಬಸ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕು. ಇಲ್ಲದೇ ಇದ್ದಲ್ಲಿ ದಂಡ ವಿಧಿಸಲಾಗುವುದು, ಕಾರ್ಯಾಚರಣೆ ಶುಕ್ರವಾರವೂ ಮುಂದುವರೆಯಲಿದೆ. ಸ್ಥಳೀಯ ಬಸ್‌ಗಳಲ್ಲಿಯೂ ಕನ್ನಡ ನಾಮಫಲಕ ಕಡ್ಡಾಯವಾಗಿದ್ದು, ಬಸ್‌ ಮಾಲೀಕರು ಇದನ್ನು ಅನುಷ್ಠಾನಗೊಳಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.