ADVERTISEMENT

ಮಂಗಳೂರು | ಅಡಿಕೆ ಧಾರಣೆ ‘ಅಕಾಲಿಕ’ ಹೆಚ್ಚಳ: ರೈತರಿಗೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 15:52 IST
Last Updated 15 ಮಾರ್ಚ್ 2024, 15:52 IST
ಪ್ರಾತಿನಿಧಿಕ
ಪ್ರಾತಿನಿಧಿಕ   

ಮಂಗಳೂರು: ಆಮದು ಮಾಡುವ ಅಡಿಕೆಯ ಕನಿಷ್ಠ ಬೆಲೆ (ಎಂಐಪಿ) ಏರಿಕೆ ಮಾಡಿದ್ದರಿಂದ ಖುಷಿಗೊಂಡಿದ್ದ ಅಡಿಕೆ ಬೆಳೆಗಾರರು ಈಗ ಸ್ಥಳೀಯ ಅಡಿಕೆಯ ದಾರಣೆ ಏರಿಕೆಯಾದ ಕಾರಣ ‘ಡಬಲ್‌’ ಸಂಭ್ರಮದಲ್ಲಿದ್ದಾರೆ. 

ಮ್ಯಾನ್ಮಾರ್‌, ಇಂಡೊನೇಷ್ಯಾ ಮತ್ತಿತರ ಕಡೆಗಳಿಂದ ಆಮದಾಗುವ ಅಡಿಕೆಯ ಬೆಲೆ ಹೆಚ್ಚಿಸಿ ಸ್ಥಳೀಯ ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ರಾಜ್ಯದ ಅಡಿಕೆ ಬೆಳೆಗಾರರ ಸಹಕಾರ ಸಂಘಗಗಳ ಪ್ರತಿನಿಧಿಗಳು ನಿರಂತರವಾಗಿ ಆಗ್ರಹಿಸುತ್ತಿದ್ದರು. ಇದರ ಬೆನ್ನಲ್ಲೇ ವಿದೇಶದ ಅಡಿಕೆಯ ಬೆಲೆಯನ್ನು ₹ 251ರಿಂದ ₹ 351ಕ್ಕೆ ಏರಿಸಲಾಗಿತ್ತು.

ಆದರೆ ಫೆಬ್ರುವರಿ ಅಂತ್ಯ ಮತ್ತು ಮಾರ್ಚ್ ತಿಂಗಳ ಆರಂಭದ ಕೆಲವು ದಿನಗಳ ವರೆಗೆ ರಾಜ್ಯದಲ್ಲಿ ಅಡಿಕೆಯ ದಾರಣೆ ಕಡಿಮೆ ಇತ್ತು. ಈ ವಾರ ಸ್ವಲ್ಪ ಏರಿಕೆ ಕಂಡಿದ್ದು ರೈತರ ಮುಖದಲ್ಲಿ ಹರ್ಷ ಉಕ್ಕಿಸಿದೆ. ಮಾರ್ಚ್ ತಿಂಗಳಲ್ಲಿ ಸಾಮಾನ್ಯವಾಗಿ ಅಡಿಕೆ ಧಾರಣೆ ಕಡಿಮೆಯಾಗುತ್ತದೆ. ಆದರೆ ಇದೇ ಮೊದಲ ಬಾರಿ ಈ ತಿಂಗಳಲ್ಲಿ ಉತ್ತಮ ಬೆಲೆ ಬಂದಿದೆ ಎಂದು ರೈತರು ಹೇಳುತ್ತಿದ್ದಾರೆ.

ADVERTISEMENT

‘ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಮಾರ್ಚ್‌ನಲ್ಲಿ ಕೃಷಿ ಸಾಲ ತೀರಿಸುವ, ಬಾವಿ ತೋಡುವ, ಮದುವೆ ಮತ್ತಿತರ ಸಮಾರಂಭಗಳನ್ನು ಮಾಡುವ ಕಾರಗಳಿಂದ ಅಡಿಕೆ ಮಾರಾಟಕ್ಕೆ ಮುಂದಾಗುತ್ತಾರೆ. ಅಂಥ ಪರಿಸ್ಥಿತಿಯಲ್ಲಿ ಧಾರಣೆ ಕುಸಿಯುವುದು ಸಾಮಾನ್ಯ. ಜೂನ್‌ನಿಂದ ಅಕ್ಟೋಬರ್ ಅಥವಾ ನವೆಂಬರ್‌ ವರೆಗೆ ಬೆಲೆ ಏರಿಕೆ ಆಗುತ್ತದೆ. ಈ ಬಾರಿ ಮಾರ್ಚ್‌ನಲ್ಲಿ ಉತ್ತಮ ಬೆಲೆ ಬಂದಿರುವುದು ಸಂತಸದ ವಿಷಯ’ ಎಂದು ಪಾಣೆಮಂಗಳೂರಿನ ಯೋಗೇಶ್ ಭಟ್‌ ಹೇಳಿದರು.

‍ಫೆಬ್ರುವರಿಗೂ ಮೊದಲು ಅಡಿಕೆ ಕೆಜಿಗೆ ₹ 420ರ ಆಸುಪಾಸಿನಲ್ಲಿತ್ತು. ನಂತರ ದಿಢೀರ್ ಕುಸಿತ ಕಂಡಿತ್ತು. ಈಗ ಮತ್ತೆ ಏರುಗತಿಯಲ್ಲಿ ಸಾಗಿ ₹ 340ಕ್ಕೂ ಹೆಚ್ಚು ಆಗಿದೆ.

‘ಚುನಾವಣೆ ಕಾರಣಕ್ಕೋ ಏನೋ, ಈ ಬಾರಿ ಅನಿರೀಕ್ಷಿತವಾಗಿ ಮಾರ್ಚ್‌ನಲ್ಲಿ ಅಡಿಕೆ ಧಾರಣೆ ಹೆಚ್ಚಾಗಿದೆ. ಕಳೆದ ವಾರಕ್ಕಿಂತ ಈ ವಾರ ₹ 10ರಷ್ಟು ಏರಿಕೆ ಕಂಡಿದೆ. ರೈತರ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆ’ ಎನ್ನುತ್ತಾರೆ ವರ್ತಕ ಅಮೃತ್‌.

‘ಅಡಿಕೆಯನ್ನು ಅಕ್ರಮವಾಗಿ ಆಮದು ಮಾಡಲಾಗುತ್ತದೆ. ಮ್ಯಾನ್ಮಾರ್‌ನಿಂದ ಹೆಚ್ಚು ಅಡಿಕೆಯನ್ನು ತರುವುದರಿಂದ ಸ್ಥಳೀಯ ರೈತರಿಗೆ ಹೆಚ್ಚು ತೊಂದರೆಯಾಗುತ್ತದೆ’ ಎಂದು ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಚ್‌. ಕೃಷ್ಣಕುಮಾರ್ ಹೇಳಿದರು.

ಪ್ರಾತಿನಿಧಿಕ

‘ಅಡಿಕೆ ಆಮದು ಮಾಡುವುದರಿಂದ ಭಾರತದ ಅಡಿಕೆ ಗೌಣವಾಗುತ್ತಿದೆ. ಪ್ರತಿ ತಿಂಗಳು 200 ಟನ್‌ಗಳಿಗೂ ಹೆಚ್ಚು ಅಡಿಕೆ ಸಂಗ್ರಹದ ಗುರಿ ಹೊಂದಿರುವ ಬೃಹತ್ ಕಂಪನಿಗಳು ಮ್ಯಾನ್ಮಾರ್‌ನಂಥ ದೇಶದ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ ಎಂಬುದು ಸ್ಥಳೀಯ ಬೆಳೆಗಾರರನ್ನು ಗಂಭೀರ ಯೋಚನೆಗೆ ಈಡುಮಾಡಿದೆ’ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.