ADVERTISEMENT

ಮಂಗಳೂರು: ಆ.7ರಂದು ಸುಭಾಷ್ ನಗರದಲ್ಲಿ ಟಿಪ್ಪು ಹೌಸ್‌ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 12:55 IST
Last Updated 5 ಆಗಸ್ಟ್ 2022, 12:55 IST

ಮಂಗಳೂರು: ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ‘ಟಿಪ್ಪು ಹೌಸ್’ ಯೋಜನೆಯಡಿನಿರ್ಮಿಸಿರುವ ಮನೆಯ ಹಸ್ತಾಂತರ ಕಾರ್ಯ ಇದೇ 7ರಂದು ನಡೆಯಲಿದೆ.

ಉಳ್ಳಾಲ ತಾಲ್ಲೂಕು ಮುನ್ನೂರು ಗ್ರಾಮ ಪಂಚಾಯಿತಿಯ ಸುಭಾಷ್ ನಗರದಲ್ಲಿ ನಿರ್ಮಿಸಿರುವ ಮನೆಯನ್ನು ಅಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಕುಟುಂಬವೊಂದಕ್ಕೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಬಬ್ಬುಕಟ್ಟೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಸ್ತ ಬೆಳ್ತಂಗಡಿಯ ಉಪ ಖಾಜಿ ಗುರುವಾಯನಕೆರೆಯ ಸೈಯದ್ ಸಾದಾತ್ ತಂಙಳ್ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿಪ್ಪು ಖಾಸಿಂ ಅಲಿ, ಶಾಸಕ ಯು.ಟಿ.ಖಾದರ್‌, ಕಾಂಗ್ರೆಸ್ ಮುಖಂಡ ಐವನ್ ಡಿ ಸೋಜ, ರಾಣಿಪುರ ಚರ್ಚ್‌ನ ಧರ್ಮಗುರು ರೆವರೆಂಡ್ ಫಾದರ್ ಜಯಪ್ರಕಾಶ್ ಡಿ ಸೋಜ, ಯೆನೆಪೋಯ ವಿವಿಯ ಕುಲಪತಿ ವೈ.ಎಂ.ಅಬ್ದುಲ್ಲ ಕುಞಿ, ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್ಫ್ರೆಡ್ ಡಿ ಸೋಜ, ನಿವೃತ್ತ ಪ್ರಾಧ್ಯಾಪಕ ಪಟ್ಟಾಭಿರಾಮ ಸೋಮಯಾಜಿ, ಪತ್ರಕರ್ತ ಎ.ಕೆ.ಕುಕ್ಕಿಲ, ಪೊಸಕುರಲ್ ನಿರ್ದೆಶಕ ವಿದ್ಯಾಧರ ಶೆಟ್ಟಿ ಮತ್ತಿತರರು ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.

ADVERTISEMENT

ಸಮಿತಿ ಈಗಾಗಲೇ ಹೊಸ ಮನೆಯೊಂದನ್ನು ವಿತರಿಸಿದ್ದು ಎರಡು ಮನೆಗಳನ್ನು ದುರಸ್ತಿ ಮಾಡಿಕೊಟ್ಟಿದೆ. ಸುಭಾಷ್ ನಗರದಲ್ಲಿ ನಿರ್ಮಿಸಿರುವ ಮನೆಗೆ ವಿದ್ಯುತ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಸಮಿತಿ ವಿತರಿಸಿದೆ. ನೆತ್ತಿಲಪದವಿನಲ್ಲಿ ಮನೆ ದುರಸ್ತಿಗಾಗಿ ಕುಟುಂಬವೊಂದಕ್ಕೆ ಹಣ ನೀಡಲಾಗಿದೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರಿಗೆ ಮತ್ತು ಕ್ಯಾನ್ಸರ್ ಪೀಡಿತರಿಗೆ ವೈದ್ಯಕೀಯ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಂಗವಿಕಲರಿಗೆ ಗಾಲಿಕುರ್ಚಿ ಮತ್ತು ಊರುಗೋಲು ವಿತರಿಸಿರುವ ಸಮಿತಿಯು ವಿದ್ಯಾರ್ಥಿಗಳಿಗೆ ಪುಸ್ತಕ, ಹೆಣ್ಣುಮಕ್ಕಳ ಮದುವೆಗೆ ನೆರವು ನೀಡಿದೆ, ಬಾವಿ ತೋಡಲು ಸಹಾಯ ಮಾಡಿದೆ ಎಂದು ಹೇಳಿದ ಅವರು ಭಾನುವಾರದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಸಮಿತಿಯ ಗೌರವಾಧ್ಯಕ್ಷ ಇಬ್ರಾಹಿಂ ಲಬೈಕ್, ಉಪಾಧ್ಯಕ್ಷರಾದ ಬಿ.ವಿಷ್ಣುಮೂರ್ತಿ, ವಿಲ್ಫ್ರೆಡ್ ಡಿ ಸೋಜ ಮತ್ತು ಕಾನೂನು ಸಲಹೆಗಾರ ಆರ್‌.ಕೆ.ಮದನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.