ಮಂಗಳೂರು: ಏಕ ಬಳಕೆಯ ಪ್ಲಾಸ್ಟಿಕ್‌ಮುಕ್ತ ಸಂತೆ ನಡೆಸಲು ಪಣತೊಟ್ಟಿರುವ ಮೂಡುಬಿದಿರೆಯ ಪುರಸಭೆ, ಪರಿಸರ ಪ್ರೇಮಿಗಳು ಹಾಗೂ ರೋಟರಿ ಕ್ಲಬ್‌ನವರು ‘ಚೀಲ ತನ್ನಿ ಇಲ್ಲವೇ ಚೀಲ ಖರೀದಿಸಿ’ ಎಂಬ ವಿನೂತನ ಅಭಿಯಾನ ಆರಂಭಿಸಿದ್ದಾರೆ.
ಮೇ 23ರಂದು ನಡೆಯುವ ಬೆದ್ರದ ಸಂತೆಯ ಮೂಲಕ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಇದಕ್ಕಾಗಿ 1,000ಕ್ಕೂ ಹೆಚ್ಚು ಬಟ್ಟೆಯ ಕೈಚೀಲಗಳು ಸಿದ್ಧವಾಗುತ್ತಿವೆ.
‘ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಯುವ ವಾರದ ಸಂತೆಯಲ್ಲಿ ಸರಾಸರಿ ಎರಡು ಟನ್ ಹಸಿ ಕಸ, ಒಂದು ಟನ್‌ನಷ್ಟು ಪ್ಲಾಸ್ಟಿಕ್ ಮತ್ತು ಇತರ ಕಸ ಸಂಗ್ರಹವಾಗುತ್ತದೆ. ಪರಿಸರ ಮಾಲಿನ್ಯ ಸೃಷ್ಟಿಸುವ ಪ್ಲಾಸ್ಟಿಕ್ ಕಸ ಕಡಿಮೆ ಮಾಡುವುದು ನಮ್ಮ ಗುರಿ. ಇದಕ್ಕಾಗಿ, ‘ಪ್ಲಾಸ್ಟಿಕ್ ಕವರ್ ಬಿಡಿ ಬಟ್ಟೆಯ ಚೀಲ ಹಿಡಿ, ನಡೆ ಸಂತೆಗೆ ಬಟ್ಟೆಯ ಚೀಲದೊಂದಿಗೆ’ ಘೋಷವಾಕ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ಎನ್ನುತ್ತಾರೆ ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ.
‘ಏಕಬಳಕೆಯ ಪ್ಲಾಸ್ಟಿಕ್‌ಮುಕ್ತ ಸಂತೆ ನಡೆಸಲು ಬಟ್ಟೆ ಚೀಲ ತಯಾರಿಸುತ್ತಿದ್ದೇವೆ. ಇದಕ್ಕಾಗಿ ಬಳಸಿದ ಕಾಟನ್ ಸೀರೆ, ಬೆಡ್‌ಶೀಟ್, ಕಿಟಕಿ ಹಾಗೂ ಬಾಗಿಲಿನ ಪರದೆ ಅಥವಾ ಯಾವುದೇ ಬಿಡಿ ಬಟ್ಟೆಗಳನ್ನು ಒದಗಿಸುವಂತೆ ಸಾರ್ವಜನಿಕರನ್ನು ವಿನಂತಿಸಿದ್ದೆವು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರೊ. ಗೋಪಿಕಾ ಅವರು ವಿದ್ಯಾರ್ಥಿಗಳ ಸಹಾಯದೊಂದಿಗೆ 400ಕ್ಕೂ ಅಧಿಕ ಹತ್ತಿ ಸೀರೆಗಳನ್ನು ಸಂಗ್ರಹಿಸಿ, ಪರಿಸರ ಪ್ರೇಮಿ ಜಯಪ್ರಕಾಶ್ ಎಕ್ಕೂರ ಮೂಲಕ ಕಳುಹಿಸಿದ್ದಾರೆ. ಶೂನ್ಯ ತಾಜ್ಯ ಕಂಬಳಕ್ಕೆ ಸ್ಥಳೀಯರು ನೀಡಿದ್ದ ಬಟ್ಟೆಗಳನ್ನೂ ಈಗ ಚೀಲ ಮಾಡಲು ಬಳಸಿಕೊಳ್ಳಲಾಗಿದೆ’ ಎನ್ನುತ್ತಾರೆ ಪುರಸಭೆಯ ಸ್ವಚ್ಛತಾ ರಾಯಭಾರಿಯಾಗಿರುವ ಸಂಧ್ಯಾ ಎ.
‘1,000 ಬಟ್ಟೆ ಚೀಲಗಳ ತಯಾರಿಕೆಯ ಪ್ರಾಯೋಜಕತ್ವವನ್ನು ಮೂಡುಬಿದಿರೆ ರೋಟರಿ ಕ್ಲಬ್‌ನವರು ವಹಿಸಿಕೊಂಡಿದ್ದಾರೆ. ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರು ಹಾಗೂ ಪಟ್ಟಣದ ಎಲ್ಲ ಪರಿಸರ ಆಸಕ್ತರ ಕಳಕಳಿಯಿಂದ ಈ ಅಭಿಯಾನದ ಯೋಜನೆ ರೂಪಿಸಲು ಸಾಧ್ಯವಾಗಿದೆ. ಏಕಬಳಕೆಯ ಪ್ಲಾಸ್ಟಿಕ್ ಮುಕ್ತ ಸಂತೆ ಆಗುವವರೆಗೆ ಈ ಅಭಿಯಾನ ಮುಂದುವರಿಯಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಅನುಷ್ಠಾನ ಹೇಗೆ?
ಸಂತೆಗೆ ಬರುವ ಗ್ರಾಹಕರು ತರುವ ಚೀಲಗಳನ್ನು ಸ್ವಯಂ ಸೇವಕರು ಗಮನಿಸುತ್ತಾರೆ. ಅವರ ಬಳಿ ಚೀಲ ಇಲ್ಲದಿದ್ದರೆ ಅಥವಾ ಪ್ಲಾಸ್ಟಿಕ್ ಕವರ್ ಇದ್ದರೆ ಬಟ್ಟೆ ಚೀಲ ಬಳಸುವಂತೆ ತಿಳಿ ಹೇಳುತ್ತಾರೆ. ₹5ಕ್ಕೆ ಎರಡು ಬಟ್ಟೆ ಚೀಲಗಳನ್ನು ಅವರು ಮಾರಾಟ ಮಾಡುತ್ತಾರೆ. ಇದರಿಂದ ಬಂದ ಆದಾಯವನ್ನು ಮುಂದಿನ ವಾರದ ಸಂತೆಯ ಚೀಲ ತಯಾರಿಕೆಗೆ ಬಳಸಲಾಗುತ್ತದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ 30ರಷ್ಟು ವಿದ್ಯಾರ್ಥಿಗಳು ಪುರಸಭೆ ಸಿಬ್ಬಂದಿ ಸ್ವಯಂ ಸೇವಕರಾಗಿ ಕೆಲಸ ಮಾಡಲಿದ್ದಾರೆ.
ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸುವ ನಿಟ್ಟಿನಲ್ಲಿ ಪುರಸಭೆಯ ಕಾರ್ಯಕ್ಕೆ ನಾವು ಕೈ ಜೋಡಿಸಿದ್ದೇವೆ. ಸಾರ್ವಜನಿಕರು ಏಕಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಗೆ ಸಹಕರಿಸಬೇಕು.–ರವಿಪ್ರಸಾದ್ ಉಪಾಧ್ಯಾಯ ರೋಟರಿ ಕ್ಲಬ್ ಅಧ್ಯಕ್ಷ
ಸಂತೆಗೆ ಬರುವ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರಲ್ಲೂ ಜಾಗೃತಿ ಮೂಡಿದಾಗ ಮಾತ್ರ ಅಭಿಯಾನ ಯಶಸ್ಸು ಕಾಣಲು ಸಾಧ್ಯ.–ಇಂದು ಎಂ. ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.